ಮಡಿಕೇರಿ, ಏ. 20: ಮಾರ್ಚ್ 30 ರಿಂದ ಏಪ್ರಿಲ್ 12ರವರೆಗೆ ನಡೆದಿರುವ ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಪಾಪನ ಇಂದಿನಿಂದ ರಾಜ್ಯಾದ್ಯಂತ ಆರಂಭಗೊಂಡಿದೆ. ಯಾವದೇ ಲೋಪÀ ದೋಷ, ಗೊಂದಲಗಳಿಗೆ ಅವಕಾಶವಾಗದಂತೆ ನಿಯಮ ಬದ್ಧವಾಗಿ ಮೌಲ್ಯಮಾಪನ ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಗತ್ಯ ಕ್ರಮ ಕೈಗೊಂಡಿದೆ. ಮೌಲ್ಯ ಮಾಪನ ಕೆಲಸಕ್ಕೆ ಅಗತ್ಯವಾದ ಸೂಚನೆಗಳನ್ನು ಮಂಡಳಿ ಹೊರಡಿಸಿದ್ದು, ಈ ಬಗ್ಗೆ ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ.
ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ರಾಜ್ಯದ ಬೇರೆ ಜಿಲ್ಲೆಯ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನಕ್ಕೆ ರವಾನಿಸಲಾಗಿದ್ದು, ಇದು ಎಲ್ಲಿಯದ್ದು ಎಂಬದನ್ನು ಗೌಪ್ಯವಾಗಿಡಲಾಗಿದೆ. ಗೌಪ್ಯತೆ ಕಾಪಾಡುವದು ಸೇರಿದಂತೆ ಇನ್ನಿತರ ನಿಯಮಾವಳಿಯ ಪಾಲನೆಗೆ ಮಂಡಳಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ನಿಯೋಜಿತ ಶಿಕ್ಷಕರಿಗೆ ನಿರ್ದೇಶನ ನೀಡಿದೆ.
ಮಂಡಳಿಯ ಕೋರಿಕೆಯಂತೆ ಕೊಡಗು ಜಿಲ್ಲೆಯ ಮೌಲ್ಯಮಾಪನ ಕೇಂದ್ರವಾದ ನಗರದ ಸಂತಮೈಕಲರ ಶಾಲೆಯ ವ್ಯಾಪ್ತಿಯ 200 ಮೀಟರ್ ಅಂತರದಲ್ಲಿ ಸೆಕ್ಷನ್ 144 ರಂತೆ ನಿಷೇಧಾಜ್ಞೆ ವಿಧಿಸಲಾಗಿದೆ.
(ಮೊದಲ ಪುಟದಿಂದ) ಮೌಲ್ಯಮಾಪನಕ್ಕೆ ವಿಷಯವಾರು ಒಟ್ಟು ಆರು ಕೇಂದ್ರಗಳನ್ನು ತೆರೆಯಲಾಗಿದೆ.
ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನಕ್ಕೆ ಇಂತಿಷ್ಟು ಎಂದು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ತಲಾ ವಿಷಯಕ್ಕೆ ಒಬ್ಬರು ಜಂಟಿ ಮುಖ್ಯ ಮೌಲ್ಯಮಾಪಕರು ಇವರ ಅಧೀನದಲ್ಲಿ ಉಪ ಮುಖ್ಯ ಮೌಲ್ಯಮಾಪಕರು ಹಾಗೂ ಸಹಾಯಕ ಮೌಲ್ಯಮಾಪಕರನ್ನು ನಿಯೋಜಿಸಲಾಗಿದೆ.
ಅಧಿಕಾರಿ, ಸಿಬ್ಬಂದಿಗಳು ಸೇರಿದಂತೆ ಒಟ್ಟು 648 ಮಂದಿ ಮೌಲ್ಯಮಾಪನ ನಡೆಸಲಿದ್ದಾರೆ. ನಿಯೋಜಿತ ಸಿಬ್ಬಂದಿಗಳು ದಿನವೊಂದಕ್ಕೆ ಇಂಗ್ಲಿಷ್ ಹಾಗೂ ಹಿಂದಿ ವಿಷಯದಲ್ಲಿ 26 ಉತ್ತರ ಪತ್ರಿಕೆ ಹಾಗೂ ಇತರ ವಿಷಯದಲ್ಲಿ 20 ಉತ್ತರ ಪತ್ರಿಕೆಯ ಮೌಲ್ಯಮಾಪನ ನಡೆಸಬೇಕಿದೆ.
ಸಹಾಯಕ ಮೌಲ್ಯಮಾಪಕರು, ಮೌಲ್ಯಮಾಪನ ಉತ್ತರ ಪತ್ರಿಕೆಯನ್ನು ಉಪ ಮುಖ್ಯ ಮೌಲ್ಯಮಾಪಕರು ಹಾಗೂ ನಂತರ ಜಂಟಿ ಮುಖ್ಯ ಮೌಲ್ಯಮಾಪಕರು ದೃಢೀಕರಿಸಬೇಕಿದೆ.
ಮೌಲ್ಯಮಾಪನ ಕೇಂದ್ರಕ್ಕೆ ನಿಯೋಜಿತ ಸಿಬ್ಬಂದಿಗಳು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನೀಡಿರುವ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕಿದೆ. ಸಂಬಂಧಪಡದ ಇತರರಿಗೆ ಕೇಂದ್ರಕ್ಕೆ ತೆರಳಲು ಪ್ರವೇಶ ನಿರಾಕರಿಸಲಾಗಿದೆ.