ವೀರಾಜಪೇಟೆ, ಏ. 20: ಬೆಳೆಗಾರರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಕೋಟು ಪರಂಬುವಿನಲ್ಲಿ ನಡೆದಿದೆ.
ಮೇವಡ ಚೋಟು ದೇವಯ್ಯ (67) ಎಂಬವರು ಮೃತ ವ್ಯಕ್ತಿ. ಮರಣ ಪತ್ರ ಬರೆದಿಟ್ಟಿರುವ ಇವರು ವೀರಾಜಪೇಟೆ ಗ್ರಾಮಾಂತರ ವೃತ್ತ ನಿರೀಕ್ಷಕರ ಹೆಸರಿಗೆ ನಾನು ಸ್ವ ಇಚ್ಛೆಯಿಂದ ಸಾಯುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಬಿದ್ದಾಟಂಡ ಕಪ್ ಹಾಕಿ ಉತ್ಸವದಲ್ಲಿ ಇಂದು ಮೇವಡ ಹಾಗೂ ಐಚೆಟ್ಟಿರ ಕುಟುಂಬದ ನಡುವೆ ಪಂದ್ಯ ನಡೆದಿದ್ದು, ಇದರಲ್ಲಿ ಮೇವಡ ತಂಡ ಜಯಗಳಿಸಿದೆ.
ಮೃತ ದೇವಯ್ಯ ಅವರ ಪುತ್ರ ಶರತ್ ಕುವೈತ್ನಲ್ಲಿದ್ದು, ಅವರು ಪಂದ್ಯದಲ್ಲಿ ಆಟವಾಡಿದ್ದು, ದೇವಯ್ಯ ಅವರು ಕುಟುಂಬದೊಂದಿಗೆ ತೆರಳಿದ್ದರು. ಅಪರಾಹ್ನ ಪುತ್ರ ಕುವೈತ್ಗೆ ಹಿಂದಿರುಗಬೇಕಿದ್ದು, ದೇವಯ್ಯ ಅವರ ಪತ್ನಿ ಜ್ಯೋತಿ ತಂಗಮ್ಮ ಮಗನನ್ನು ಬಸ್ ಹತ್ತಿಸಲೆಂದು ಮನೆಯಿಂದ ತೆರಳಿದ್ದರು. ಈ ಸಂದರ್ಭ ಮರಣ ಪತ್ರ ಬರೆದಿಟ್ಟು ದೇವಯ್ಯ ಅವರು ಮನೆಯ ಹಿಂಭಾಗದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ವೃತ್ತನಿರೀಕ್ಷಕ ಕುಮಾರ್ ಆರಾಧ್ಯ ಭೇಟಿ ನೀಡಿ ಮಹಜರು ನಡೆಸಿದರು.