ನಾಪೋಕ್ಲು, ಏ. 20: ಸ್ಥಳೀಯ ಚೆರಿಯ ಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿದ್ದಾಟಂಡ ಕಪ್ ಹಾಕಿ ಪಂದ್ಯಾಟದಲ್ಲಿ ಮೇವಡ, ಚೆರುಮಂದಂಡ, ಕನ್ನಂಡ, ಚೆಯ್ಯಂಡ, ಉದಿಯಂಡ, ಪರದಂಡ, ಪಟ್ಟಚೆರವಂಡ, ಕಾಣತಂಡ, ಬಲ್ಲಚಂಡ, ಅಪ್ಪಂಡೆರಂಡ, ಕಾಂಡಂಡ, ಬೊಳಕಾರಂಡ, ಅಲ್ಲಾರಂಡ, ಚೀಯಕಪೂವಂಡ, ಕಬ್ಬಚ್ಚಿರ, ಬೊಳ್ಳಂಡ, ಚಪ್ಪಂಡ, ಮಲ್ಲಮಾಡ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.

ಇಂದು ನಡೆದ ಪಂದ್ಯಾಟದಲ್ಲಿ ಚೆರುಮಂದಂಡ ತಂಡವು ಮಂಡೀರ ಮಾದಾಪುರ ತಂಡವನ್ನು 6-3 ಗೋಲುಗಳಿಂದ ಮಣಿಸಿತು. ಚೆರುಮಂದಂಡ ಪರ ಕವನ್ ಕಾರ್ಯಪ್ಪ ಹ್ಯಾಟ್ರಿಕ್ ಸೇರಿದಂತೆ 4 ಗೋಲು ಬಾರಿಸಿದರು. ಕೀರ್ತನ್ 2 ಗೋಲು ಬಾರಿಸಿದರು.

ನಂತರ ನಡೆದ ಪಂದ್ಯಾಟದಲ್ಲಿ ಮೇವಡ ಮತ್ತು ಐಚೆಟ್ಟಿರ ತಂಡವು ನಿಗದಿತ ಸಮಯದಲ್ಲಿ ಯಾವದೇ ಗೋಲು ಗಳಿಸದೆ ಟೈ ಬ್ರೇಕರ್ ನಿಯಮವನ್ನು ಅಳವಡಿಸಲಾಯಿತು. ಇದರಲ್ಲಿ ಮೇವಡ 5-4 ರಿಂದ ವಿಜಯ ಸಾಧಿಸಿತು.

ಕಾಣತಂಡ ತಂಡವು ಪಳಂಗೇಟಿರ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಕಾಣತಂಡ ಕನಿ ಮೊಣ್ಣಪ್ಪ 2 ಗೋಲು ಬಾರಿಸಿದರು. ಮೇವಡ ತಂಡ ಐಚೆಟ್ಟಿರ ತಂಡವನ್ನು ಟೈ ಬ್ರೇಕರ್‍ನಲ್ಲಿ 5-4 ರಿಂದ ಮಣಿಸಿತು.

ಕಬ್ಬಚ್ಚಿರ ತಂಡ ಮಲ್ಲೇಂಗಡ ತಂಡವನ್ನು 1-0 ಗೋಲುಗಳಿಂದ ಮಣಿಸಿತು. ಕಬ್ಬಚೀರ ಪರ ಬೋಪಣ್ಣ ಗೋಲು ಬಾರಿಸಿದರು.

ಬಲ್ಲಚಂಡ ತಂಡವು ಮತ್ರಂಡ ತಂಡವನ್ನು 6-4 ಗೋಲುಗಳಿಂದ ಮಣಿಸಿತು. ನಿಗದಿತ ಸಮಯದಲ್ಲಿ ತಲಾ ಒಂದೊಂದು ಗೋಲು ದಾಖಲಾಯಿತು.

ಕನ್ನಂಡ ತಂಡವು ಕೇಟೋಳಿರ ತಂಡವನ್ನು ಟೈ ಬ್ರೇಕರ್ ಮುಖಾಂತರ 1-4 ಅಂತರದಿಂದ ಮಣಿಸಿತು. ಮೊದಲು ಒಂದೊಂದು ಗೋಲು ಸಮಬಲ ಸಾಧಿಸಿತ್ತು. ಕೇಟೋಳಿರ ಪರ ಕಾಳಪ್ಪ, ಕನ್ನಂಡ ಪರ ರೋಹನ್ ಗೋಲು ಬಾರಿಸಿದರು.

ಬೊಳ್ಳಂಡ ತಂಡವು ವಾಟೇರಿರ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು. ಬೊಳ್ಳಂಡ ಸುಬ್ಬಯ್ಯ ಗೋಲು ಬಾರಿಸಿದರು.

ಚೆಯ್ಯಂಡ ತಂಡ ಕೇಕಡ ತಂಡದ ವಿರುದ್ಧ ಭರ್ಜರಿ 4 ಗೋಲುಗಳ ಗೆಲುವು ದಾಖಲಿಸಿತು. ಚೆಯ್ಯಂಡ ಪರ ತಿಮ್ಮಯ್ಯ 2, ನಂದ 1, ರಘು 1, ಕೇಕಡ ಪರ ಪೂವಣ್ಣ.

ಅಪ್ಪಂಡೇರಂಡ ತಂಡವು ಕೋಚಮಂಡ ತಂಡವನ್ನು 4-1 ಗೋಲುಗಳಿಂದ ಮಣಿಸಿತು. ನಿಗದಿತ ಅವಧಿಯಲ್ಲಿ ಒಂದೊಂದು ಸಮಬಲ ಸಾಧಿಸಿತು. ನಂತರ ಟೈ ಬ್ರೇಕರ್ ಅಳವಡಿಸಲಾಯಿತು. ಉದಿಯಂಡ ತಂಡ ಕುಟ್ಟಂಡ ತಂಡವನ್ನು 1-0 ಗೋಲುಗಳಿಂದ ಮಣಿಸಿತು.

ಕಾಂಡಂಡ ತಂಡ ಪೋರಂಗಡ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು. ಬಡ್ಡೀರ ತಂಡ ಬಾರದೇ ಇರುವದರಿಂದ ಚೀಯಕ್‍ಪೂವಂಡ ತಂಡವನ್ನು ವಿಜಯಿ ಎಂದು ಘೋಷಿಸ ಲಾಯಿತು.

ಅಚ್ಚಕಾಳೇರ ತಂಡದ ಗೈರು ಹಾಜರಿಯಿಂದ ಚಪ್ಪಂಡ ತಂಡವನ್ನು ವಿಜಯಿ ಎಂದು ಘೋಷಿಸ ಲಾಯಿತು.