ಮಡಿಕೇರಿ, ಏ. 20: ನಗರಸಭಾ ವ್ಯಾಪ್ತಿಯಲ್ಲಿ ವಸತಿ ವಾಣಿಜ್ಯೋದ್ಯಮ, ಕೈಗಾರಿಕೆಗಳ ಸಹಿತ ಎಲ್ಲಾ ಹಂತದಲ್ಲಿ ನಗರಸಭೆಗೆ ಪಾವತಿಸಬೇಕಾಗಿರುವ ವಾರ್ಷಿಕ ತೆರಿಗೆಗಳನ್ನು ಕಡ್ಡಾಯ ಪಾವತಿಸುವಂತೆ ಪೌರಾಯುಕ್ತೆ ಶುಭ ಅವರು ಸಾರ್ವಜನಿಕರಲ್ಲಿ ಕೋರಿದ್ದು, ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.

ನಗರದ ಸರ್ವತೋಮುಖ ಏಳಿಗೆ ಸಲುವಾಗಿ ಸಾರ್ವಜನಿಕ ವಲಯದಿಂದ ಕಾನೂನಿನಂತೆ ತೆರಿಗೆಗಳನ್ನು ಪಾವತಿಸುವದು ಪ್ರತಿಯೊಬ್ಬರ ಕರ್ತವ್ಯವೆಂದು ನೆನಪಿಸಿರುವ ಅವರು, ಸಕಾಲದಲ್ಲಿ ತೆರಿಗೆಗಳನ್ನು ಪಾವತಿಸಿ ಸರಕಾರದಿಂದ ಶೇ. 5 ರಷ್ಟು ರಿಯಾಯಿತಿ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಶುಭ ಅವರು, ನಗರದ ಎಲ್ಲಾ ಆಸ್ತಿ ಮಾಲೀಕರು ಪ್ರಸಕ್ತ ಏಪ್ರಿಲ್ ಮಾಹೆಯಿಂದ ಜಾರಿಗೊಂಡಿರುವ ಹೊಸ ಆರ್ಥಿಕ ವರ್ಷದಲ್ಲಿ ತಮ್ಮ ಪಾಲಿನ ಕಂದಾಯ (ತೆರಿಗೆ)ಯನ್ನು ಕೂಡಲೇ ಪಾವತಿಸಿ ಶೇ. 5 ರಿಯಾಯಿತಿಯನ್ನು ಸದುಪಯೋಗ ಮಾಡಿಕೊಳ್ಳಲು ಅವಕಾಶವಿದೆ ಎಂದರು.

ಅಲ್ಲದೆ, ಆರ್ಥಿಕ ಮಾಹೆ ಏಪ್ರಿಲ್ ಹಾಗೂ ಮೇ ಮತ್ತು ಜೂನ್‍ನಲ್ಲಿ ತೆರಿಗೆ ಪಾವತಿಸುವವರಿಗೆ ಬಡ್ಡಿ ಇರುವದಿಲ್ಲವೆಂದು ಸ್ಪಷ್ಟಪಡಿಸಿರುವ ಆಯುಕ್ತೆ, ಜುಲೈನಿಂದ ತೆರಿಗೆ ಅಥವಾ ಕಂದಾಯ ಪಾವತಿ ಮಾಡುವವರಿಗೆ ಪ್ರತಿ ತಿಂಗಳು ವಿಳಂಬ ಅನುಸಾರ ಶೇ. 2ರಷ್ಟು ದಂಡಪಾವತಿಸಬೇಕಾದೀತು ಎಂದು ನೆನಪಿಸಿದ್ದಾರೆ.

ವಂಚಕರಿಗೆ ಕುತ್ತು : ಮಡಿಕೇರಿ ನಗರವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ಸಹಿತ ಉದ್ದಿಮೆಗಳನ್ನು ನಡೆಸುತ್ತಿದ್ದು, ತೆರಿಗೆ ಕಟ್ಟದಿದ್ದರೆ, ಅಂತಹವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಅನುಸರಿಸಲಾಗುವದು ಎಂದು ಪೌರಾಯುಕ್ತರು ತೆರಿಗೆ ವಂಚಕರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ನೀರಿನ ಕರ ಪಾವತಿಸದಿದ್ದರೆ, ಅಂತಹವರ ನೀರು ಪೂರೈಕೆ ಸಂಪರ್ಕ ಕಡಿತಗೊಳಿಸಲಾಗುವದು ಎಂಬದಾಗಿಯೂ ಸೂಚ್ಯವಾಗಿ ಸುಳಿವು ನೀಡಿದ್ದು, ನಗರದ ಅಭಿವೃದ್ಧಿಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಕಸವಿಲೇವಾರಿ ತೆರಿಗೆ

ಮೂರು ಹಂತದಲ್ಲಿ ಕಸ ವಿಲೇವಾರಿ ಸಂಬಂಧ ತೆರಿಗೆಯನ್ನು ಮಾಸಿಕವಾರು ನಿಗಧಿಗೊಳಿಸಿದ್ದು, ಆ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗುವದು ಎಂದು ಪೌರಾಯುಕ್ತೆ ಅಂಕಿ ಅಂಶ ನೀಡಿದ್ದಾರೆ. ನಗರದಲ್ಲಿ 1000 ಅಡಿಗಳಷ್ಟು ವ್ಯಾಪ್ತಿಯ ಮನೆಗಳನ್ನು ಹೊಂದಿರುವವರಿಗೆ ಮಾಸಿಕ ರೂ. 35 ರಂತೆ ವಾರ್ಷಿಕ ರೂ. 420 ಪಾವತಿಸಬೇಕು, 1000 ಚ.ಅಡಿ ಮೇಲ್ಪಟ್ಟವರಿಗೆ ಮಾಸಿಕ ರೂ. 40 ರಂತೆ ವಾರ್ಷಿಕ ರೂ. 480 ನೀಡತಕ್ಕದ್ದು.

ವಾಣಿಜ್ಯ ಕಟ್ಟಡಗಳನ್ನು 500 ಚ.ಅಡಿ ತನಕ ಹೊಂದಿದವರು ಮಾಸಿಕ ರೂ. 40 ರಂತೆ ವಾರ್ಷಿಕ 480 ರೂ. ಪಾವತಿ ಮಾಡಬೇಕು. 500 ಅಡಿ ಮೇಲ್ಪಟ್ಟು 1000 ಅಡಿ ತನಕವಿದ್ದರೆ ರೂ. 52 ರಂತೆ ವಾರ್ಷಿಕ ರೂ. 624 ಮೊತ್ತ ಸಲ್ಲಿಸಬೇಕು. ಒಂದು ಸಾವಿರ ಚದರ ಅಡಿಗಿಂತ ಮಿಗಿಲಾಗಿದ್ದರೆ ಮಾಸಿಕ ರೂ. 65 ರಂತೆ ವರ್ಷಕ್ಕೆ ರೂ. 780 ಕಟ್ಟಬೇಕು.

ಅಂತೆಯೇ ಕಲ್ಯಾಣ ಮಂಟಪಗಳು, ಹೊಟೇಲ್, ಆಸ್ಪತ್ರೆ ಇತ್ಯಾದಿಗಳಲ್ಲಿ 500 ಚ.ಅಡಿ ತನಕ ರೂ. 163 ರಂತೆ ವಾರ್ಷಿಕ ಮೊತ್ತ ರೂ. 1956 ನಗರಸಭೆಗೆ ಕಟ್ಟಬೇಕಿದ್ದು, 500 ರಿಂದ ಸಾವಿರ ಚದರ ಅಡಿ ತನಕ ತಿಂಗಳಿಗೆ ರೂ. 325 ರಂತೆ ವಾರ್ಷಿಕ ರೂ. 3900 ಪಾವತಿಸಬೇಕು. 1000 ಅಡಿ ಮೇಲ್ಪಟ್ಟಿದ್ದರೆ, ತಿಂಗಳಿಗೆ ರೂ. 650 ರಂತೆ ವರ್ಷಕ್ಕೆ ರೂ. 7800 ರಂತೆ ಪಾವತಿಸಲು ನಿಯಮ ರೂಪಿಸಲಾಗಿದೆ. ಕಲ್ಯಾಣ ಮಂಟಪಗಳಲ್ಲಿ ಕಾರ್ಯಕ್ರಮ ಜರುಗುವ ಸಂದರ್ಭ ಪ್ರತಿ ಸಮಾರಂಭಕ್ಕೆ ಶೇ. 30 ರಂತೆ ರೂ. 260 ಮೊತ್ತ ಪಾವತಿಸಬೇಕೆಂದು ಶುಭ ಮಾಹಿತಿ ನೀಡಿದ್ದಾರೆ. - ಶ್ರೀ ಸುತ