ಶ್ರೀಮಂಗಲ, ಏ. 20: ‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟ’ದ ಆಶ್ರಯದಲ್ಲಿ ವರ್ಷಂಪ್ರತಿ ನಡೆಸುವ ‘ಮುದ್ದಿಯಡ ಕುಶಾ ಪೊನ್ನಪ್ಪ ದತ್ತಿ ನಿಧಿ’ ಹಾಗೂ ‘ಇಟ್ಟೀರ ರಾಜಪ್ಪ ದತ್ತಿ ನಿಧಿ’ಯ ಸ್ಪರ್ಧೆಗೆ ಲೇಖನಗಳನ್ನು ಆಹ್ವಾನಿಸಲಾಗಿದ್ದು, ಮೇ 1 ರಂದು ಪೂರ್ವಾಹ್ನ 10.30 ಗಂಟೆಗೆ ವಿರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಮಹಾಗಣಪತಿ ಆಂಜನೇಯ ದೇವಸ್ಥಾನದಲ್ಲಿ ದತ್ತಿ ಕಾರ್ಯಕ್ರಮ ನಡೆಯಲಿದೆ.

ಈ ಪ್ರಯುಕ್ತ ‘ಮುದ್ದಿಯಡ ಕುಶಾ ಪೊನ್ನಪ್ಪ ದತ್ತಿ’ ಸ್ಪರ್ಧೆಗೆ ಕೊಡವ ಭಾಷೆಯ ಸಣ್ಣ ಕಥೆಗಳನ್ನು ಆಹ್ವಾನಿಸಲಾಗಿದ್ದು, ಲೇಖಕರು ಎರಡು ಸಾವಿರ ಶಬ್ದಗಳಿಗೆ ಮೀರದ ಎಲ್ಲೂ ಪ್ರಕಟವಾಗದ ತಮ್ಮ ಸ್ವಂತ ರಚನೆಯ ಸಣ್ಣ ಕಥೆಗಳನ್ನು ತಾ. 27 ರೊಳಗೆ ತಲಪುವಂತೆ, ಹಾಗೂ ‘ಇಟ್ಟೀರ ರಾಜಪ್ಪ ದತ್ತಿ’ ಸ್ಪರ್ಧೆಗೆ ಕೊಡವ ಭಾಷೆಯ ಚುಟುಕಗಳನ್ನು ಆಹ್ವಾನಿಸಲಾಗಿದ್ದು, ಲೇಖಕರು ಎಲ್ಲೂ ಪ್ರಕಟವಾಗದ ತಾವೇ ಸ್ವಂತ ರಚಿಸಿದ ಎರಡು ಚುಟುಕಗಳನ್ನು ತಾ. 27 ರೊಳಗೆ ತಲಪುವಂತೆ ಅಧ್ಯಕ್ಷರು, ‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟ’ ಕಚೇರಿ, ಆತ್ರೇಯ ಆಸ್ಪತ್ರೆ ಎದುರು, ವೀರಾಜಪೇಟೆ. ಈ ವಿಳಾಸಕ್ಕೆ ತಲುಪಿಸತಕ್ಕದ್ದು.

ಮೇ 1 ರಂದು ನಡೆಯುವ ದತ್ತಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದ ‘ಮಂಡೀರ ಜಯಾ ಅಪ್ಪಣ್ಣ ದತ್ತಿನಿಧಿ’ಯ ಸ್ಪರ್ಧೆಗೆ ಜಯಾ ಅಪ್ಪಣ್ಣರವರು ಬರೆದ ‘ಕೊಡವ ಜಯಾ ಭಾರತ’ ಪುಸ್ತಕ ಓದುವ ಸ್ಪರ್ಧೆಯನ್ನು ಹಿರಿಯ ಹಾಗೂ ಕಿರಿಯರಿಗೆ ಪ್ರತ್ಯೇಕ ವಿಭಾಗದಲ್ಲಿ ಏರ್ಪಡಿಸಲಾಗಿದ್ದು, ಎಲ್ಲಾ ದತ್ತಿ ಸ್ಪರ್ಧೆಗಳಿಗೂ, ದತ್ತಿ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವದು ಎಂದು ‘ಕೂಟ’ದ ಕಾರ್ಯದರ್ಶಿ ಚೆಟ್ಟಂಗಡ ರವಿ ಸುಬ್ಬಯ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9845308228, 9880584732, 9448326014 ಸಂಖ್ಯೆಗಳನ್ನು ಸಂಪರ್ಕಿಸಬಹುದು.