ಕೂಡಿಗೆ, ಏ. 20: ಶಿರಂಗಾಲ ದಿಂದ ಕುಶಾಲನಗರದ ವರೆಗೆ ಕಳೆದ ಸಾಲಿನಲ್ಲಿ ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿ ನಡೆದ ಸಂದರ್ಭ ಒಳಚರಂಡಿ ನಿರ್ಮಾಣ ಮಾಡದೆ ಕೂಡಿಗೆ- ಕೂಡುಮಂಗಳೂರು ಮಧ್ಯೆ ಕೈಗಾರಿಕಾ ಬಡಾವಣೆಯ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಮಳೆ ಬಂತೆಂದರೆ ಚರಂಡಿಯಲ್ಲಿ ಹೋಗುವ ನೀರೆಲ್ಲಾ ರಸ್ತೆಯ ಮೇಲೆ ಹರಿಯುತ್ತದೆ.

ಅಲ್ಲದೆ, ಸಮೀಪದಲ್ಲಿರುವ ಕೈಗಾರಿಕಾ ಘಟಕದ ತಡೆಗೋಡೆ ಹಾಗೂ ಎದುರಿನಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯ ತಡೆಗೋಡೆಯು ಕಳೆದ ವಾರ ಸುರಿದ ಮಳೆಯಿಂದಾಗಿ ಕುಸಿದಿತ್ತು. ಮತ್ತೆ ಇದೇ ಜಾಗದಲ್ಲಿ ಇಂದು ಸುರಿದ ಭಾರೀ ಮಳೆಯಿಂದಾಗಿ ಈ ಜಾಗದಲ್ಲಿ ಒಂದು ಅಡಿಗೆ ಹೆಚ್ಚು ನೀರು ನಿಂತಿದ್ದು, ಈ ಮಾರ್ಗದಲ್ಲಿ ಚಲಿಸುವ ವಾಹನಗಳಿಗೆ ತೊಂದರೆ ಉಂಟಾಗಿದೆ.

ಕಾರ್ಮಿಕರು ಈ ರಸ್ತೆಯ ಬದಿಯಲ್ಲಿ ಹೆಚ್ಚು ಕಾಲ್ನಡಿಗೆಯಲ್ಲಿ ತಿರುಗಾಡುವುದರಿಂದ ನೀರು ಹೆಚ್ಚಾಗಿದ್ದಲ್ಲಿ ಅನಾಹುತ ತಪ್ಪಿದ್ದಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಸಂಬಂಧಪಟ್ಟ ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳು ಅಥವಾ ರಾಜ್ಯ ಹೆದ್ದಾರಿ ರಸ್ತೆಯ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆ ದಾರರು ಸ್ಥಳ ಪರಿಶೀಲಿಸಿ ಸರಿಪಡಿಸು ವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮನೆಯ ಮೇಲೆ ಮರ

ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಕುಮಾರ ಎಂಬವರ ಮನೆಯ ಮೇಲೆ ನಿನ್ನೆ ಸುರಿದ ಮಳೆಯಿಂದಾಗಿ ಮನೆಯ ಸಮೀಪದಲ್ಲಿದ್ದ ಹಲಸಿನ ಮರವು ಬಿದ್ದ ಪರಿಣಾಮ ಮನೆಯ ಸಿಮೆಂಟ್ ಶೀಟುಗಳು ಪುಡಿ ಪುಡಿಯಾಗಿದ್ದು, ಮನೆಯವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಳಿಗೆ ಹಾರಿದ ಅಂಗನವಾಡಿ ಕೇಂದ್ರದ ಹೆಂಚುಗಳು:- ನಿನ್ನೆ ಸುರಿದ ಗಾಳಿ ಮಳೆಯಿಂದ ಬಸವನತ್ತೂರು ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಹೆಂಚುಗಳು ಹಾರಿಹೋಗಿದ್ದು, ಅಂಗನವಾಡಿ ಕೇಂದ್ರದ ಒಳಗೆಲ್ಲಾ ಮಳೆ ನೀರು ನಿಂತಿದೆ.

ಸ್ಥಳಕ್ಕೆ ಕುಶಾಲನಗರ ಕಂದಾಯ ನಿರೀಕ್ಷಕ ನಂದ ಕುಮಾರ್, ಗ್ರಾಮ ಲೆಕ್ಕಿಗ ಗೌತಮ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯೆ ಸಾವಿತ್ರಿರಾಜನ್ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸಿದ್ದಾಪುರ, ಕುಶಾಲನಗರ, ಕಿಗ್ಗಾಲು, ಮೂರ್ನಾಡು ವ್ಯಾಪ್ತಿಯಲ್ಲಿ ಇಂದು ಮಳೆಯಾಗಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೂಡ ರಾತ್ರಿ ವೇಳೆ ಮಳೆಯಾಗಿದೆ.