ಮಡಿಕೇರಿ, ಏ. 20: ಹಿಂದೂ ಸಮಾಜವನ್ನು ಒಗ್ಗೂಡಿಸುವ ಹಾಗೂ ಭಾವೈಕ್ಯತೆಯನ್ನು ಮೂಡಿಸುವ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಮೇ 5 ರಂದು ಸಿದ್ದಾಪುರದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ ಎಂದು ವಿಹೆಚ್‍ಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಕುರಿತು ಮಾಹಿತಿ ನೀಡಿದರು. ಮೇ 5 ರಂದು ಬೆಳಿಗ್ಗೆ 10 ಗಂಟೆಗೆ ಸಿದ್ದಾಪುರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯಿಂದ ಸಭಾ ಕಾರ್ಯಕ್ರಮ ನಡೆಯುವ ನೆಲ್ಲಿಹುದಿಕೇರಿ ಸೇತುವೆ ಬಳಿಯ ಮೈದಾನದವರೆಗೆ ಶೋಭಾಯಾತ್ರೆ ನಡೆಯಲಿದೆ. ಗೋಪೂಜೆಯ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಗುವದು. ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಲಿದ್ದು, ವಿಶ್ವ ಹಿಂದೂ ಪರಿಷತ್‍ನ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರಕುಮಾರ್ ಜೈನ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಪ್ರಾಸ್ತವಿಕವಾಗಿ ಮಾತನಾಡಲಿದ್ದಾರೆ ಎಂದು ನರಸಿಂಹ ತಿಳಿಸಿದರು.
ಸಾವಿರಾರು ಸಂಖ್ಯೆಯ ಹಿಂದೂ ಬಾಂಧವರು ಪಾಲ್ಗೊಳುವ ಸಿದ್ದಾಪುರ ಸಮಾವೇಶದಲ್ಲಿ ಹಿಂದೂ ಧರ್ಮ ಜಾಗೃತಿಯನ್ನು ಮೂಡಿಸಲಾಗು ವದಲ್ಲದೆ ಸಮಾಜಕ್ಕೆ ಆತಂಕವನ್ನು ತಂದೊಡ್ಡುತ್ತಿರುವ ವಿಚಾರಗಳ ಬಗ್ಗೆ ವಿವರಿಸಲಾಗುವದೆಂದು ನರಸಿಂಹ ತಿಳಿಸಿದರು.
ಸಮಾವೇಶದ ಸಂಚಾಲಕ ಯು.ಎಸ್. ಜಗತ್ ಮಾತನಾಡಿ, ವೀರಾಜಪೇಟೆ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಹಿಂದೂ ಸಮಾಜವನ್ನು ಜಾಗೃತಗೊಳಿಸುವದು ಸಮಾವೇಶದ ಉದ್ದೇಶವೆಂದು ಅವರು ಹೇಳಿದರು.
ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಅಧ್ಯಕ್ಷ ಎಂ.ಎಂ. ಟಾಟಾ ಬೋಪಯ್ಯ, ಭಜರಂಗ ದಳದ ಜಿಲ್ಲಾ ಸಹ ಸಂಚಾಲಕ ಕೆ.ಹೆಚ್. ಚೇತನ್, ಪ್ರಮುಖರಾದ ಪಿ.ಜಿ. ಕಮಲ್ ಹಾಗೂ ಮನುರೈ ಉಪಸ್ಥಿತರಿದ್ದರು.