ಕೂಡಿಗೆ, ಏ. 20: ಸೋಮವಾರ ಪೇಟೆಯ ಕುಂದಳ್ಳಿಯಿಂದ ಕೂಡಿಗೆಯ ಸಮೀಪದ ಸೀಗೆಹೊಸೂರು ಮಾರ್ಗವಾಗಿ ಹೆಬ್ಬಾಲೆ ಸಮೀಪದ ಕೊಡಗು-ಮೈಸೂರು ಸಂಪರ್ಕ ರಸ್ತೆಯ ಮೂಲಕ ದೂಪದ ಮರ ತುಂಬಿದ ಪಿಕ್‍ಅಪ್‍ವೊಂದು ಸಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸೋಮವಾರಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯ ಸಿನಿಮೀಯ ರೀತಿ ನಡೆಯಿತು.

ರೂ. 70 ಸಾವಿರ ಮೌಲ್ಯದ ದೂಪದ ಮರ ತುಂಬಿದ ವಾಹನವನ್ನು ಹೆಬ್ಬಾಲೆಯಿಂದ ಬೆನ್ನಟ್ಟಿ ಮೈಸೂರು ಜಿಲ್ಲೆಯ ಸೂಳೆಕೋಟೆ ಹತ್ತಿರ ಪಿಕ್‍ಅಪ್ (ಕೆ.12. 7548) ವಾಹನವನ್ನು ತಡೆಯಲು ಯತ್ನಿಸಲಾಯಿತು. ಚಾಲಕ ನಿಲ್ಲಿಸದೇ ವೇಗವಾಗಿ ತೆರಳಿದ ಸಂದರ್ಭ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಪಿಕ್‍ಅಪ್‍ಗೆ ಗುಂಡು ಹಾರಿಸಿದರು. ಪರಿಣಾಮ ಟಯರ್ ಪಂಕ್ಚರ್ ಆದ ಸಂದರ್ಭ ವಾಹನವು ಸಂಚರಿಸಲು ಸಾಧ್ಯವಾಗದೆ ನಿಂತು ಹೋಯಿತು. ಈ ವೇಳೆ ಸಿಬ್ಬಂದಿಗಳು ಚಾಲಕ ಸೇರಿದಂತೆ ವಾಹನವನ್ನು ವಶಪಡಿಸಿಕೊಂಡು ಆರೋಪಿ ನಿಖಿಲ್‍ನನ್ನು ಬಂಧಿಸಿದ್ದಾರೆ. ಮಾಲು ತುಂಬಿದ ವಾಹನವನ್ನು ಸೋಮವಾರಪೇಟೆಗೆ ಹಿಂತಿರುಗಿಸಿ ಪ್ರಕರಣವನ್ನು ದಾಖಲಿಸಲಾಗಿದೆ. ವಾಹನವು ಪಾಲಾಕ್ಷ ಎಂಬವರಿಗೆ ಸೇರಿದ್ದಾಗಿದ್ದು, ನಿಖಿಲ್ ಎಂಬವನು ವಾಹನ ಚಾಲನೆ

ಮಾಡುತ್ತಿದ್ದ ಎಂದು ಗೊತ್ತಾಗಿದೆ. ಕಾರ್ಯಾಚರಣೆಯಲ್ಲಿ ಎಸಿಎಫ್ ಚಿಣ್ಣಪ್ಪ, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಮೋಹಿಸಿನ್ ಬಾಶ, ಉಪ ವಲಯ ಅರಣ್ಯಾಧಿಕಾರಿಗಳಾದ ಫಿರೋಜ್‍ಖಾನ್, ಸತೀಶ್, ಮಹದೇವ ನಾಯಕ್, ಅರಣ್ಯ ರಕ್ಷಕರುಗಳಾದ ಲೋಕೇಶ್, ಮೋಹನ್, ಚೇತನ್, ಗಣೇಶ್, ಪೂವಪ್ಪ, ಚಾಲಕರಾದ ವಾಸು, ಚಂದನ್ ಪಾಲ್ಗೊಂಡಿದ್ದರು.