ಚೆಟ್ಟಳ್ಳಿ, ಏ. 20: ಕೊಡಗಿನಲ್ಲೀಗ ಕ್ರೀಡಾ ಹಬ್ಬದ ಸಂಭ್ರಮವೋ ಸಂಭ್ರಮ. ಒಂದೆಡೆ ಹಾಕಿ ಮತ್ತೊಂದೆಡೆ ಕ್ರಿಕೆಟ್...
ಕೊಡಗಿನ ಮೈದಾನದಲ್ಲಿ ಎಲ್ಲಿ ನೋಡಿದರಲ್ಲಿ ಪ್ರಾಕ್ಟೀಸೋ... ಪ್ರಾಕ್ಟೀಸ್. ಕೊಡವ ಕುಟುಂಬಗಳ ನಡುವೆ ನಾಪೋಕ್ಲುವಿನಲ್ಲಿ ಈಗಾಗಲೇ ಪ್ರಾರಂಭವಾಗಿರುವ ಬಿದ್ದಾಟಂಡ ಕುಟುಂಬಸ್ಥರು ಆಯೋಜಿಸಿರುವ ಹಾಕಿ ನಮ್ಮೆಯಲ್ಲಿ ಸೆಣಸಲು ಕುಟುಂಬಗಳು ತಮ್ಮೂರ ಮೈದಾನಗಳಲ್ಲಿ ಮುಂಜಾನೆ ಹಾಗೂ ಸಂಜೆ ತರಬೇತಿ ನಡೆಸುತ್ತಿರುವ ದೃಶ್ಯ ಕಾಣಬರುತ್ತಿದೆ.
ಆಟಗಾರ ಮೈದಾನವನ್ನು ನÀಮಸ್ಕರಿಸುವದು, ತಾತ್ಕಾಲಿಕ ಗೋಲ್ ಪೋಸ್ಟ್, ಗೋಲಿಯ ತಯಾರಿ, ಇರುವ ಮಕ್ಕಳಲ್ಲೇ ಪಾಲುಮಾಡಿ ಎರಡು ತಂಡವಾಗಿಸಿ ಆಟ ಪ್ರಾರಂಭಿಸುವದು, ನುರಿತವನಿಂದ ಆಟದ ಪಾಠ...
ತಂದೆ, ಮಗ, ಮಗಳು, ಪತ್ನಿ, ಸೊಸೆ ಹಾಗೂ ಮೊಮ್ಮಕ್ಕಳೆಲ್ಲ ಹಾಕಿ ತರಬೇತಿಯ ಮೂಡಿನಲ್ಲಿದ್ದು ದೊಡ್ಡವರೆಲ್ಲ ಉದ್ದನೆಯ ಸ್ಟಿಕ್ ಹಿಡಿದರೆ ಪುಟಾಣಿ ಮಕ್ಕಳ ಪುಟ್ಟ ಪುಟ್ಟ ಕೈಗಳು ಸಣ್ಣ ಹಾಕಿ ಸ್ಟಿಕ್‍ಗಳನ್ನಿಡಿದು ಮೈದಾನದುದ್ದಕ್ಕೂ ಅತ್ತಿಂದಿತ್ತ ಓಡಾಡುತ್ತಿರುವದು ಕಾಣಬರುತ್ತಿದೆ. ತರಬೇತಿ ಸಮಯ ದಲ್ಲಿ ಕೈಕಾಲುಗಳಿಗೆ ನೋವಾದರೂ ಪರಿವೆಯೇ ಇಲ್ಲ. ಹಾಕಿಹಬ್ಬದಲ್ಲಿ ಆಡಬೇಕೆಂಬ ದೊಂದೇ ಗುರಿ.
ಇಲ್ಲಿ ವಯಸ್ಸಿನ ಬೇಧವಿಲ್ಲ, ಆಟದಲ್ಲಿ ಮುಳುಗಿದಾಗ ಕುಟುಂಬದ ಪ್ರತಿಷ್ಠೆಯೊಂದೇ... ಎಲ್ಲಿಯೂ ಕಾಣಸಿಗದ ಕೊಡವ ಜನಾಂಗದ ಒಗ್ಗಟ್ಟಿನ ಸಂಕೇತವಾದ ಹಾಕಿ ನಮ್ಮೆಯ ಸಂಭ್ರಮಕ್ಕೆ ನಿಮಗೆಲ್ಲ ಸ್ವಾಗತ!
-ಪುತ್ತರಿರ ಕರುಣ್ ಕಾಳಯ್ಯ