ಸೋಮವಾರಪೇಟೆ, ಏ. 20: ಇಲ್ಲಿನ ತಾಲೂಕು ಕಚೇರಿಯಲ್ಲಿ ಆರ್‍ಟಿಸಿ ವಿತರಿಸಲು ಒಂದೇ ಕೌಂಟರ್ ಇರುವದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದ್ದು, ತಕ್ಷಣ ಹೆಚ್ಚುವರಿ ಕೌಂಟರ್ ತೆರೆಯಲು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖಾ ಸಚಿವ ಕಾಗೋಡು ತಿಮ್ಮಪ್ಪ ತಹಶೀಲ್ದಾರ್‍ಗೆ ಸೂಚಿಸಿದರು.
ಸಚಿವರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭ ಪಟ್ಟಣದ ಕಾಂಗ್ರೆಸ್ ಕಚೇರಿಗೆ ಭೇಟಿ ಸಾರ್ವಜನಿಕರು ಹಾಗೂ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದರು. ತಾಲೂಕು ಕಚೇರಿಯಲ್ಲಿ ಆರ್‍ಟಿಸಿ ವಿತರಿಸಲು ಒಂದೇ ಕೌಂಟರ್ ಇದ್ದು, ಕೃಷಿಕರಿಗೆ ತೊಂದರೆಯಾಗುತ್ತಿದೆ. ಎರಡು ಕೌಂಟರ್ ತೆರಯುವಂತೆ ಸೂಚನೆ ನೀಡಬೇಕು ಎಂದು ಪಕ್ಷದ ಮುಖಂಡರುಗಳಾದ ಶಾಂತಳ್ಳಿ ಲೋಕೇಶ್ ಕುಮಾರ್, ನಂದಕುಮಾರ್, ತಾಕೇರಿ ಸತೀಶ್, ಹಾನಗಲ್ ಮಿಥುನ್ ಮತ್ತಿತರರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ತಾಲೂಕು ಕಚೇರಿಯಲ್ಲಿ ಎರಡು ಕೌಂಟರ್ ತೆರೆಯಲು ಕೂಡಲೆ ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರ್ ಕೃಷ್ಣ ಅವರಿಗೆ ಸೂಚಿಸಿದರು. ಪಟ್ಟಣದಲ್ಲಿ ಮೀಟರ್‍ಬಡ್ಡಿ ದಂಧೆಯಲ್ಲಿ ತೊಡಗಿರುವ ವ್ಯಕ್ತಿಯೋರ್ವರು ಸಾಲ ಮರುಪಾವತಿಗಾಗಿ ತಾಕೇರಿ ಗ್ರಾಮದ ಕೃಷಿಕ ನಂದೀಶ್ ಅವರಿಗೆ ಬೆದರಿಕೆ ಕರೆ ಮಾಡಿದ ಹಿನ್ನೆಲೆ ಕೃಷಿಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೃತರ ಪತ್ನಿ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ತಾಕೇರಿ ಸತೀಶ್ ಸಚಿವರಲ್ಲಿ ಮನವಿ ಮಾಡಿದರು.
ಪೊಲೀಸ್ ಅಧಿಕಾರಿಗೆ ಕರೆ ಮಾಡಿದ ಸಚಿವರು, ಮೃತರ ಮೊಬೈಲ್‍ಗೆ ಬಂದ ಕರೆಗಳ ಬಗ್ಗೆ ಪರಿಶೀಲಿಸಿ, ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ಪಕ್ಷದ ಮುಖಂಡರಾದ ಕೆ.ಎಂ. ಲೋಕೇಶ್, ಶೀಲಾ ಡಿಸೋಜ, ಕೆ.ಎ. ಯಾಕೂಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.