ಗೋಣಿಕೊಪ್ಪ, ಏ. 20: ಮಾಯಮುಡಿ ಕ್ಲಸ್ಟರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ಬೇಸಿಗೆ ಸಂಭ್ರಮ “ಸ್ವಲ್ಪ ಓದು - ಸ್ವಲ್ಪ ಮೋಜು” ಕಾರ್ಯಕ್ರಮವನ್ನು ಊರಿನ ಶಿಕ್ಷಣಾಸಕ್ತರು ಹಾಗೂ ದಾನಿಗಳಾದ ಸಣ್ಣುವಂಡ ವಿಶ್ವನಾಥ್ ಉದ್ಘಾಟಿಸಿದರು.

ನಂತರ ಮಾತನಾಡಿ, ಶಿಬಿರದಲ್ಲಿ ಮಕ್ಕಳು ಸಕ್ರೀಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಾಡ ಜೀವನ್ ಮಾತನಾಡಿ, ಬೇಸಿಗೆ ಸಂಭ್ರಮದಲ್ಲಿ 5 ವಾರ, ಕುಟುಂಬ, ನೀರು, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಪರಿಸರದ ಬಗ್ಗೆ ಬೋಧಿಸಲಾಗುತ್ತದೆ. ಚಟುವಟಿಕೆಗಳೊಂದಿಗೆ ಓದುವ ಅಭ್ಯಾಸ, ಓದಿ ಮತ್ತು ಚರ್ಚಿಸಿ, ಸಮಸ್ಯೆಗಳನ್ನು ಬಿಡಿಸಿ, ಮಾಡಿಕಲಿ, ವೇಗದ ಗಣಿತ ಹೀಗೆ ಹಲವು ಚಟುವಟಿಕೆಗಳನ್ನು ನಿತ್ಯ ನೀಡಲಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸೋಫಿಯಾ, ಸಹ ಶಿಕ್ಷಕರಾದ ರಾಗಿಣಿ, ಸತ್ಯ ಹಾಜರಿದ್ದರು. ನಸೀಮಾ ವಂದಿಸಿದರು.