ಸಿದ್ದಾಪುರ,ಏ.21: ಆರೋಗ್ಯದ ಬಗ್ಗೆ ಅಸಡ್ಡೆ ತೋರಿದರೆ ಜೀವಕ್ಕೆ ಕುತ್ತು ಬರುತ್ತದೆಂದು ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ಮುಖ್ಯಸ್ಥ ಡಾ|| ಚಿದಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿಯ ರೋಟರಿ ಮಿಸ್ಟಿಹಿಲ್ಸ್ ಆರೋಗ್ಯ ಸೇವಾ ಘಟಕ, ಸ್ವರ್ಣಕ್ಲಿನಿಕ್ ನೆಲ್ಯಹುದಿಕೇರಿ, ಹಿಂದೂ ಸಮಾಜ ಸುಧಾರಣಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ವಿ.ಜಿ. ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯರುಗಳಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ನೆಲ್ಲಿಹುದಿಕೇರಿ ಶ್ರೀ ಮುತ್ತಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ|| ಚಿದಾನಂದ ಅವರು ನಮ್ಮ ದೇಶದ ಒಟ್ಟು ಜನ ಸಂಖ್ಯೆಯಲ್ಲಿ ಶೇ 12ರಷ್ಟು ಮಂದಿ ಮದುಮೇಹ ಕಾಯಿಲೆಯಿಂದ ನರಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ನೆಲ್ಯಹುದಿಕೇರಿಯ ಸ್ವರ್ಣಕ್ಲಿನಿಕ್‍ನ ವೈದ್ಯ ಡಾ|| ಉದಯಕುಮಾರ್ ಮಾತನಾಡಿ, ಆರೋಗ್ಯ ಸರಿಇದ್ದರೆ ಅದೇ ಐಶ್ವರ್ಯ, ಸಂಪತ್ತು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿಹಿಲ್ಸ್‍ನ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ರೋಟರಿ ಮಿಸ್ಟಿಹಿಲ್ಸ್‍ನ ಸ್ಥಾಪಕ ಅಧ್ಯಕ್ಷ ಬಿ.ಜಿ. ಅನಂತಶಯನ, ಜಿ.ಪಂ. ಸದಸ್ಯೆ ಸುನೀತಾ ಮಂಜುನಾಥ್, ತಾ.ಪಂ ಸದಸ್ಯೆ ಸುಹಾದ ಆಶ್ರಫ್, ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ, ಹಿಂದೂ ಸಮಾಜ ಸುಧಾರಣ ಸಮಿತಿ ಗೌರವಾಧ್ಯಕ್ಷ ಹಳಗದ್ದೆ ಮಾದಪ್ಪ, ಅಧ್ಯಕ್ಷ ಹೊಸ ಮನೆ ವಸಂತ್ ಕುಮಾರ್, ಡಾ|| ನವೀನ್ ಕುಮಾರ್, ಡಾ|| ರಾಜೇಶ್ವರಿ, ಶ್ರೀ ಮುತ್ತಪ್ಪ ದೇವಾಲಯದ ಸಮಿತಿಯ ಅಧ್ಯಕ್ಷ ಪಾಲಚಂಡ ಚೀಯಣ್ಣ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಾರ್ಯದರ್ಶಿ ಟಿ.ಸಿ. ಆಶೋಕ್ ವಂದಿಸಿದರು. ನಂತರ ನೆಲ್ಲಿಹುದಿಕೇರಿಯ ಆಂಗ್ಲೋ ವರ್ನಾಕುಲರ್ ಶಾಲೆಯಲ್ಲಿ ತಪಾಸಣಾ ಶಿಬಿರವು ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ವೈದ್ಯರುಗಳ ಸಲಹೆ ಸೂಚನೆಗಳನ್ನು ಪಡೆದುಕೊಂಡರು.

-ವರದಿ: ವಾಸು