ಮಡಿಕೇರಿ, ಏ. 21: ಕೇರಳ ಹಾಗೂ ಮಹಾರಾಷ್ಟ್ರಗಳಂತೆ ಕರ್ನಾಟಕದಲ್ಲಿಯೂ ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶ ನೀಡುವದಿಲ್ಲವೆಂದು ಕೇಂದ್ರ ಸಾಂಖ್ಯಿಕ ಯೋಜನಾ ಖಾತೆ ಸಚಿವ ಡಿ.ವಿ. ಸದಾಂದಗೌಡ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮ ನಿಮಿತ್ತ ಕುಶಾಲನಗರಕ್ಕೆ ಆಗಮಿಸಿದ ಸಚಿವರನ್ನು ‘ಶಕ್ತಿ’ ಪ್ರಶ್ನಿಸಲಾಗಿ ಮೇಲಿನಂತೆ ಪ್ರತಿಕ್ರಿಯಿಸಿದರು.ಕೊಡಗು ಸೇರಿದಂತೆ ರಾಜ್ಯದ 10 ಜಿಲ್ಲೆಗಳು, 33 ತಾಲೂಕುಗಳು, 1526 ಗ್ರಾಮಗಳ 20668 ಚ.ಕಿ.ಮೀ. ಪ್ರದೇಶಗಳಿಗೆ ಕಸ್ತೂರಿ ರಂಗನ್ ವರದಿ ಜಾರಿಯಿಂದ ಆಗುವ ಪರಿಣಾಮ ಕುರಿತು ಕೇಂದ್ರ ಸರಕಾರದ ಗಮನ ಸೆಳೆಯಲಾಗಿದೆ ಎಂದು ಅವರು ನುಡಿದರು. ಕರ್ನಾಟಕ ಸರಕಾರದ ವಿಳಂಬ ಧೋರಣೆಯಿಂದ ವಿವಾದ ಹುಟ್ಟಿಕೊಂಡಿದ್ದು, ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳು ವರದಿ ಜಾರಿ ವಿರುದ್ಧ ನಿರ್ಣಯ ಕೈಗೊಂಡಿದ್ದು, ತಮಗೆ ಅರಿವಿದೆ ಎಂದರು. ಸಕಾಲದಲ್ಲಿ ರಾಜ್ಯ ಸರಕಾರ ಕೇರಳ ಹಾಗೂ ಮಹಾರಾಷ್ಟ್ರ ರೀತಿಯಲ್ಲಿ ಕೇಂದ್ರಕ್ಕೆ ಮಾಹಿತಿ ರವಾನಿಸಿಲ್ಲವೆಂದು ಮಾರ್ನುಡಿದರು.

(ಮೊದಲ ಪುಟದಿಂದ) ಈಗಲಾದರೂ ತಡಮಾಡದೆ ಸ್ಥಳೀಯ ಸಂಸ್ಥೆಗಳ ನಿರ್ಣಯ ಸಹಿತ, ಕೇರಳ ಮಾದರಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ ಅವರು, ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾಳಜಿ ರಾಜ್ಯ ಸರಕಾರದ ಮೇಲಿದೆ ಎಂದು ನೆನಪಿಸಿದರು.

ವಕೀಲರ ಮುಷ್ಕರ

ಹಲವೆಡೆ ವಕೀಲರು ಮುಷ್ಕರ ನಡೆಸುತ್ತಿರುವ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಸಚಿವರು, ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ ಕೈಗೊಂಡಿರುವ ಕೆಲವು ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ವಕೀಲರು ಮುಷ್ಕರ ನಡೆಸುತ್ತಿದ್ದು, ಕೇಂದ್ರ ಸರಕಾರದ ವಿರುದ್ಧವಲ್ಲವೆಂದು ಸ್ಪಷ್ಟನೆ ನೀಡಿದರು.

ರಾಷ್ಟ್ರೀಯ ವಕೀಲರ ಪರಿಷತ್ತಿನ ಕಠಿಣ ತೀರ್ಮಾನಗಳ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿದ್ದು, ವಕೀಲಿ ವೃತ್ತಿಯಲ್ಲಿ ಅಕ್ರಮ ತಡೆಗೆ ಕೆಲವು ನಿಬಂಧನೆಗಳನ್ನು ಜಾರಿಗೊಳಿಸಿರುವದಾಗಿದೆ ಎಂದ ಡಿವಿಎಸ್ ಇದರಲ್ಲಿ ನೇರವಾಗಿ ಕೇಂದ್ರ ಸರಕಾರದ ಪಾತ್ರವಿಲ್ಲವೆಂದು ಅಭಿಪ್ರಾಯಪಟ್ಟರು.

ಗೊಂದಲ ನಿವಾರಣೆ ಭರವಸೆ

ರಾಜ್ಯ ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದಗೌಡ, ಎಲ್ಲವೂ ಸುಗಮವಾಗಿ ಬಗೆಹರಿಯುವ ವಿಶ್ವಾಸವಿದೆ ಎಂದರು. ಈಗಷ್ಟೇ ನಂಜನಗೂಡು - ಗುಂಡ್ಲುಪೇಟೆ ಚುನಾವಣೆ ಮುಗಿದಿದ್ದು, ಎಲ್ಲರೂ ಅದರ ಹಿಂದೆ ಇದ್ದರು. ಈಗ ಚುನಾವಣೆ ಬಳಿಕ ಪರಸ್ಪರ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ಭರವಸೆ ಹೊರಗೆಡವಿದರು. ರಾಷ್ಟ್ರೀಯ ನಾಯಕರ ಮಾರ್ಗದರ್ಶನದಲ್ಲಿ 2019ರ ಚುನಾವಣೆಯನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲೇ ಎದುರಿಸಲಾಗುವದು ಎಂದು ಡಿವಿಎಸ್ ಸ್ಪಷ್ಟಪಡಿಸಿದರು.