ಮಡಿಕೇರಿ, ಏ. 21: ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿಗೆ ಕೊಡಗು ಜಿಲ್ಲೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕ್ರೀಡಾ ಜಿಲ್ಲೆಯೆಂದು ಪರಿಗಣಿಸಲ್ಪಟ್ಟಿರುವ ಕೊಡಗಿನಿಂದ ಅದೆಷ್ಟೋ ಹಾಕಿ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸಿ ಕೀರ್ತಿ ತಂದಿದ್ದಾರೆ. ಭಾರತ ತಂಡದ ನಾಯಕರಾಗಿಯೂ ಹಲವರು ಕಾರ್ಯನಿರ್ವಹಿಸಿದ್ದಾರೆ. ಹಾಕಿಯೊಂದಿಗೆ ಭಾರತೀಯ ಸೇನೆಯಲ್ಲೂ ಕೊಡಗಿನ ಸಾವಿರಾರು ಮಂದಿ ಸೇವೆ ಸಲ್ಲಿಸಿದ್ದಾರೆ. ಹಾಕಿ ಕ್ರೀಡೆ ಹಾಗೂ ಸೇನೆಗೆ ಸಲ್ಲಿಸಿರುವ ಕೊಡುಗೆಯನ್ನು ಪರಿಗಣಿಸಿ ರಾಜಧಾನಿ ಬೆಂಗಳೂರಿನಲ್ಲಿ ಕೊಡಗು ಜಿಲ್ಲೆಗೆ ಇದೀಗ ಹೊಸದೊಂದು ಗೌರವ ದೊರೆತಿದೆ. ಬೆಂಗಳೂರಿನ ಶಾಂತಿ ನಗರದಲ್ಲಿರುವ ಕರ್ನಾಟಕ ರಾಜ್ಯ ಹಾಕಿ ಕ್ರೀಡಾಂಗಣಕ್ಕೆ ಇದೀಗ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾಂಗಣ ಎಂದು ನಾಮಕರಣ ಮಾಡಲಾಗಿದೆ.

ಕ್ರೀಡಾಂಗಣದಲ್ಲಿ ಇದೀಗ ಸುಮಾರು ರೂ. 3.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಸಿಂಥೆಟಿಕ್ ಟರ್ಫ್ ಹಾಗೂ ಫ್ಲಡ್‍ಲೈಟ್ ವ್ಯವಸ್ಥೆಗೆ ನಿನ್ನೆ ಚಾಲನೆ ನೀಡುವದರೊಂದಿಗೆ ಕ್ರೀಡಾಂಗಣಕ್ಕೆ ಫೀ.ಮಾ. ಕಾರ್ಯಪ್ಪ ಹೆಸರನ್ನು ನಾಮಕರಣ ಮಾಡಲಾಯಿತು.

ಅಂತರರಾಷ್ಟ್ರೀಯ ಮಟ್ಟಕ್ಕೆ

ಕರ್ನಾಟಕ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ಈತನಕ ರಾಷ್ಟ್ರೀಯ ಮಟ್ಟದ ಪಂದ್ಯಗಳು ಮಾತ್ರ ನಡೆಯುತ್ತಿತ್ತು. ಇದೀಗ ಈತನಕ ಇದ್ದ ಗ್ರೀನ್ ಟರ್ಫನ್ನು ಬದಲಾಯಿಸಲಾಗಿದ್ದು, ಅಂತರರಾಷ್ಟ್ರೀಯ ನಿಯಮದಂತೆ ನೀಲಿ ಟರ್ಫ್ ಅಳವಡಿಸಲಾಗಿದೆ. ಫ್ಲಡ್ ಲೈಟ್ ವ್ಯವಸ್ಥೆ ಉನ್ನತೀಕರಣ, ನೂತನ ಸ್ಪ್ರಿಂಕ್ಲರ್ ವ್ಯವಸ್ಥೆ ಮಾಡಲಾಗಿದೆ.

ಇದು ಪ್ರಥಮ ಹಂತದ ಕೆಲಸವಾಗಿದ್ದು, ಭವಿಷ್ಯದಲ್ಲಿ ಇನ್ನಿತರ ಎಲ್ಲಾ ವ್ಯವಸ್ಥೆಗಳು ಅಂತರರಾಷ್ಟ್ರೀಯ ಗುಣಮಟ್ಟದಂತೆ ಬದಲಾಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಬಹುದಾಗಿದೆ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.

ರಾಜ್ಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಎಂದು ಹೆಸರಿರುವಂತೆ ಇದೀಗ ಹಾಕಿ ಕ್ರೀಡಾಂಗಣಕ್ಕೆ ಫೀ.ಮಾ. ಕಾರ್ಯಪ್ಪ ಹೆಸರು ಇಡಲಾಗಿದೆ. ಹಾಕಿ ಕರ್ನಾಟಕದ ಮನವಿಯಂತೆ ರಾಜ್ಯ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ನಾಲ್ಕೈದು ಹೆಸರುಗಳು ಪಟ್ಟಿಯಲ್ಲಿದ್ದು, ಈ ಪೈಕಿ ಕಾರ್ಯಪ್ಪ ಹೆಸರನ್ನು ಅಂತಿಮಗೊಳಿಸಲಾಗಿದೆ. ಕ್ರೀಡೆ ಹಾಗೂ ಸೇನೆಗೆ ಕೊಡಗಿನ ಕಾಣಿಕೆಯನ್ನು ಪರಿಗಣಿಸಿ ಕೊಡಗಿನವರಾದ ಕಾರ್ಯಪ್ಪ ಹೆಸರು ಇಟ್ಟಿರುವದು ಸ್ವಾಗತಾರ್ಹ. ಈ ಬಗ್ಗೆ ಸರಕಾರಿ ಆದೇಶವೂ ಆಗಿದೆ, ಇದು ಜಿಲ್ಲೆಯೊಂದಿಗೆ, ವೈಯಕ್ತಿಕವಾಗಿಯೂ ತಮಗೆ ಸಂತಸ ತಂದಿದೆ ಎಂದು ಅಭಿಪ್ರಾಯಿಸಿದರು.

ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರ್‍ವಾಲ್, ಕೆ.ಓ.ಎ. ಅಧ್ಯಕ್ಷ ಕೆ. ಗೋವಿಂದರಾಜು ನಿನ್ನೆ ನೂತನ ವ್ಯವಸ್ಥೆ ಚಾಲನೆ ನೀಡಿದರು.

ಈ ಸಂದರ್ಭ ರಾಷ್ಟ್ರೀಯ ಆಟಗಾರರನ್ನು ಹೊಂದಿದ್ದ ಅಧ್ಯಕ್ಷರ ಇಲವೆನ್ ಹಾಗೂ ರಾಜ್ಯ ಇಲವೆನ್ ನಡುವೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿತ್ತು. ರಾಜ್ಯ ಇಲವೆನ್ ಪರ ಕೊಡಗಿನ ವಿ.ಆರ್. ರಘುನಾಥ್ ಆಡಿದರೆ ಅಧ್ಯಕ್ಷರ ಇಲವೆನ್ ಪರ ಎಸ್.ಕೆ. ಉತ್ತಪ್ಪ, ನಿಕಿನ್ ತಿಮ್ಮಯ್ಯ ಆಟವಾಡಿದರು.

- ಶಶಿ