ಪೊನ್ನಂಪೇಟೆ, ಏ. 21: ಮಾನವೀಯ ಮೌಲ್ಯಗಳನ್ನೊಳ ಗೊಂಡ ಜಾತ್ಯಾತೀತ ತತ್ವಗಳನ್ನು ದೇಶದಾದ್ಯಂತ ಪಸರಿಸಿದ ಸೂಫಿ ಸಂತರು ಸರ್ವಧರ್ಮ ಸಮನ್ವಯತೆಯ ಕ್ರಾಂತಿ ಮೂಡಿಸಿದ್ದರು. ಕನ್ನಡ ನಾಡಿನಲ್ಲೂ ವೈಚಾರಿಕತೆ ಮತ್ತು ಸೌಹಾರ್ಧತೆಯ ಪರಂಪರೆಗೆ ಭದ್ರ ಬುನಾದಿ ಕಲ್ಪಿಸುವಲ್ಲಿ ಸೂಫಿ ಸಂತರ ಕೊಡುಗೆ ಅಪಾರವಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಶನ್‍ನ ಸ್ಥಾಪಕ ಅಧ್ಯಕ್ಷ, ಪತ್ರಕರ್ತ ಕುವೈೀಂಡ್ರÀ ವೈ ಹಂಝತುಲ್ಲಾ ಅವರು ಹೇಳಿದರು.

ವೀರಾಜಪೇಟೆ ಸಮೀಪದ ಗುಂಡಿಗೆರೆಯ ಮುಸ್ಲಿಂ ಜಮಾಯತ್ ಆಶ್ರಯದಲ್ಲಿ ಅಲ್ಲಿನ ವಲಿಯುಲ್ಲಾ ಅವರ ಹೆಸರಿನಲ್ಲಿ ನಡೆದ ವಾರ್ಷಿಕ ಉರೂಸ್‍ನ ಸಮಾರೋಪ ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ವ ಧರ್ಮಿಯರು ಬದುಕುವ ಈ ನಾಡು ಭಾವೈಕ್ಯತೆಯ ಬೀಡಾಗಬೇಕೆಂಬ ಕಲ್ಪನೆಯಿಂದ ಅಂದಿನ ಶತಮಾನದಲ್ಲೇ ಧರ್ಮ ಪ್ರಚಾರ ನಡೆಸಿದ ಸೂಫಿ ಸಂತರು ಸೌಹಾರ್ದತೆಗೆ ಹೆಚ್ಚು ಒತ್ತು ನೀಡಿದ್ದರು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿದ್ದ ಹಿರಿಯ ಧಾರ್ಮಿಕ ವಿದ್ವಾಂಸ ನೌಫಲ್ ಸಖಾಫಿ ಕಳಸ ಅವರು ಮಾತನಾಡಿ, ಇಸ್ಲಾಂ ಧರ್ಮದ ತಿರುಳನ್ನು ಸರಿಯಾಗಿ ಅರ್ಥೈಸಿಕೊಂಡರೆ ಮನುಷ್ಯನ ಬದುಕು ಪರಿಪೂರ್ಣಗೊಳ್ಳಲು ಸಾಧ್ಯ. ತನ್ನ ಧರ್ಮವನ್ನು ಗೌರವಿಸುವದರೊಂದಿಗೆ ಇತರರ ಧರ್ಮವನ್ನು ಗೌರವದಿಂದ ಕಾಣುವಂತೆ ಬೋಧಿಸುವ ಇಸ್ಲಾಂ ಧರ್ಮ, ಪ್ರತಿಯೊಂದು ಹಂತದಲ್ಲೂ ಶಾಂತಿಯನ್ನೇ ಬಯಸುತ್ತದೆ. ಮಾನವೀಯತೆಗೆ ಕುರಾನ್‍ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ವಕ್ಫ್ ಮಂಡಳಿಯ ಸಲಹಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ರೆಹಮಾನ್, ಬೆಂಗಳೂರು ಬಿ.ಬಿ.ಎಂ.ಪಿ. ನಾಮ ನಿರ್ದೇಶಿತ ಸದಸ್ಯ, ಕಾಂಗ್ರೆಸ್ ಮುಖಂಡ ಹರೀಶ್ ಬೋಪಣ್ಣ ಮೊದಲಾದವರು ಮಾತನಾಡಿದರು.

ಗುಂಡಿಗೆರೆ ಮುಸ್ಲಿಂ ಜಮಾಯತ್‍ನ ಅಧ್ಯಕ್ಷ ಎಂ.ಎ. ಅಬ್ಬಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯ್ತಿ ಸದಸ್ಯರಾದ ಪಟ್ಟಡ ರಂಜಿ, ಡಿ.ಪಿ. ರಾಜೇಶ್ ಪದ್ಮನಾಭ, ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಎಂ.ಎಂ. ಇಸ್ಮಾಯಿಲ್, ಬೇಟೋಳಿ ಗ್ರಾ.ಪಂ. ಸದಸ್ಯ ಉಮರುಲ್ಲ್ ಫಾರೂಕ್, ಜಮಾಯತ್‍ನ ಉಪಾಧ್ಯಕ್ಷ ಮಹಮ್ಮದ್, ಕಾರ್ಯದರ್ಶಿ ಸಂಶುದ್ದೀನ್, ಜಮಾಯತ್‍ನ ಸಲಹಾ ಸಮಿತಿ ಸದಸ್ಯರಾದ ಹಸೈನಾರ್ ಹಾಜಿ, ಎಂ.ಎಸ್. ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು.

ಉರೂಸ್‍ನ ಸಮಾರೋಪದ ಭಾಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಜಿಲ್ಲಾ ಸಹಾಯಕ ಖಾಝಿ ಮಹಮ್ಮದ್ ಮುಸ್ಲಿಯಾರ್ ಎಡಪಾಲ ಅವರು ನೇತೃತ್ವ ನೀಡಿದರು. ಆರಂಭದಲ್ಲಿ ಜಮಾಯತ್‍ನ ಖತೀಬರಾದ ನಿಸಾರ್ ರೆಹಮಾನಿ ಪ್ರಾರ್ಥಿಸಿದರು. ಜಮಾಅತ್ತಿನ ಸಹ ಕಾರ್ಯದರ್ಶಿ ಎ.ಈ. ಉಬೈದುಲ್ಲಾ ಸ್ವಾಗತಿಸಿದರು. ಗುಂಡಿಗೆರೆ ಹೆಚ್.ಐ ಮದರಸದ ಅಧ್ಯಾಪಕ ಅಹಮ್ಮದ್ ಮದನಿ ವಂದಿಸಿದರು.

ಬಳಿಕ ಮೌಲೂದ್ ಪಾರಾಯಣ ಮುಕ್ತಾಯದ ಬಳಿಕ ಉರೂಸ್‍ನಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ ಅನ್ನಸಂತರ್ಪಣೆಗೈಯಲಾಯಿತು. ಇದರೊಂದಿಗೆ 3 ದಿನಗಳ ಕಾಲ ನಡೆದ ಗುಂಡಿಗೆರೆ ಉರೂಸ್ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.