ಮಡಿಕೇರಿ, ಏ.21 : ಎಸ್‍ಕೆಎಸ್‍ಎಸ್‍ಎಫ್‍ನ ನೆಲ್ಯಹುದಿಕೇರಿ ಶಾಖೆಯ 18ನೇ ವಾರ್ಷಿಕೋತ್ಸವ ಹಾಗೂ 8ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ ತಾ. 22 ಮತ್ತು 23ರಂದು ನೆಲ್ಯಹುದಿಕೇರಿಯಲ್ಲಿ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಮ್ಲಿಕ್ ದಾರಿಮಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 7 ವರ್ಷಗಳಲ್ಲಿ 59 ಬಡ ಹಾಗೂ ಅನಾಥ ಹೆಣ್ಣುಮಕ್ಕಳಿಗೆ ವಿವಾಹ ಮಾಡಿಕೊಡಲಾಗಿದ್ದು, ಪ್ರಸಕ್ತ 8ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ಮೂವರು ಬಡ ಹೆಣ್ಣು ಮಕ್ಕಳು ಕಂಕಣ ಭಾಗ್ಯವನ್ನು ಪಡೆಯಲಿದ್ದಾರೆ ಎಂದರು.ಸಮಸ್ತ ಕೇಂದ್ರ ಜಂಇಯ್ಯತ್ತುಲ್ ಉಲಮಾದ ವಿದ್ಯಾರ್ಥಿ ಸಂಘಟನೆಯಾದ ಎಸ್‍ಕೆಎಸ್ ಎಸ್‍ಎಫ್ 1999ರಲ್ಲಿ ನೆಲ್ಯಹುದಿಕೇರಿ ಯಲ್ಲಿ ಆರಂಭವಾಗಿದ್ದು, ಹಲವಾರು ಶ್ಲಾಘನೀಯ ಕಾರ್ಯಗಳನ್ನು ಮಾಡಿದೆ. ನಾಲ್ಕು ಗೋಡೆಗಳ ಮಧ್ಯೆ ಕಣ್ಣೀರಿನಿಂದ ಕಾಲ ಕಳೆಯಬೇಕಾಗಿದ್ದ ಬಡ ಹಾಗೂ ಅನಾಥ ಮುಸ್ಲಿಂ ಕನ್ಯೆಯರಿಗೆ ವಿವಾಹ ಭಾಗ್ಯ ಕಲ್ಪಿಸುವ ಮೂಲಕ ಅವರ ಕಣ್ಣೀರೊರೆಸುವ ಕಾರ್ಯವನ್ನು ಮಾಡುತ್ತಿದೆ. ನೆಲ್ಲ್ಯಹುದಿಕೇರಿ ಶಾಖೆ ಅನಾಥರಿಗೆ, ನಿರ್ಗತಿಕರಿಗೆ, ರೋಗಿಗಳಿಗೆ ಧನ ಸಹಾಯ, ಮನೆ ನಿರ್ಮಾಣ, ಉಚಿತ ಬಟ್ಟೆ ವಿತರಣೆ ಮತ್ತು ಶೈಕ್ಷಣಿಕ ರಂಗದಲ್ಲಿರುವ ವಿದ್ಯಾರ್ಥಿಗಳಿಗೆ ಧನಸಹಾಯ ನೀಡುತ್ತಿದೆ ಎಂದು ತಮ್ಲಿಕ್ ದಾರಿಮಿ ತಿಳಿಸಿದರು.

18ನೇ ವಾರ್ಷಿಕೋತ್ಸವ ತಾ. 22ರಂದು (ಇಂದು) ಸಂಜೆ 4 ಗಂಟೆಗೆ ಕೊಡಗು ಜಿಲ್ಲಾ ಎಸ್‍ವೈಎಸ್ ಅಧ್ಯಕ್ಷ ಮುತ್ತುಕೋಯ ತಂಙಳ್ ಅವರು ಧ್ವಜಾರೋಹಣ ಮಾಡುವ ಮೂಲಕ ಆರಂಭಗೊಳ್ಳಲಿದೆ.

ಸಮಸ್ತ ಖಾಝಿ ಎಂ.ಎಂ. ಅಬ್ದುಲ್ಲಾ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದಲ್ಲಿ ಪಾಣಕ್ಕಾಡ್ ಮನ್ಸೂರ್ ಆಲಿ ಸಿಹಾಬ್ ತಂಙಳ್ ಅವರ ನೇತೃತ್ವದಲ್ಲಿ ಮಜ್ಲಿಸ್ಸನ್ನೋರ್ ಮತ್ತು ಶಂಸುಲ್ ಉಲಮಾ ಮೌಲಿದ್ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನವನ್ನು ಪಾಣಕ್ಕಾಡ್ ಸೈಯದ್ ನಾಸಿರುಲ್ ಹಯ್ಯ ತಂಙಳ್ ಉದ್ಘಾಟಿಸಲಿದ್ದು, ಖ್ಯಾತ ವಾಗ್ಮಿ ಪತ್ತಾನಪುರಂ ಇ.ಪಿ. ಅಬೂಬಕ್ಕರ್ ಅಲ್‍ಖಾಸಿಮಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ತಾ. 23ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಪಾಣಕ್ಕಾಡ್ ಸ್ವಾಬಿತು ಶಿಹಾಬ್ ತಂಙಳ್ ಅವರು ವಿವಾಹ ಸಮಾರಂಭದ ನೇತೃತ್ವ ವಹಿಸಲಿದ್ದಾರೆ. ಎಸ್‍ಕೆಜೆಎಂಸಿ ಕೇಂದ್ರ ಕಾರ್ಯದರ್ಶಿ ಎಂ.ಅಬ್ದುಲ್ ರಹಮಾನ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ತಮ್ಲಿಕ್ ದಾರಿಮಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ನೆಲ್ಯಹುದಿಕೇರಿ ಶಾಖೆಯ ಜಂಟಿ ಕಾರ್ಯದರ್ಶಿ ಜಂಶೀರ್, ಪ್ರಧಾನ ಕಾರ್ಯದರ್ಶಿ ಎನ್.ಎಂ. ಷಂಶುದ್ದೀನ್, ಸಂಚಾಲಕ ಅಶ್ರಫ್ ಹಾಗೂ ನಿರ್ದೇಶಕ ಸಿ.ಎಂ.ತ್ವಾಹ ಹಾಜರಿದ್ದರು.