ಮಡಿಕೇರಿ, ಏ. 21: ವಕೀಲರ 1961ರ ಕಾಯಿದೆಗೆ ತಿದ್ದುಪಡಿ ತರುವ ಕರಡು ತಿದ್ದುಪಡಿಯನ್ನು ಹರಿದು ಹಾಕಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಕೋರ್ಟ್ ಆವರಣದಲ್ಲಿ ನಡೆಯಿತು.

ಮಸೂದೆಯಲ್ಲಿ ವಕೀಲರಿಗೆ ಮಾರಕವಾಗುವಂತಹ ಅನೇಕ ವಿಚಾರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಮಾಜದ ವಕೀಲೇತರ ಸದಸ್ಯರು ವಕೀಲರ ಪರಿಷತ್‍ಗೆ ನಿರ್ದೇಶನ ಮಾಡುವ ಅವಕಾಶ, ನ್ಯಾಯಾಧೀಶರು ನ್ಯಾಯಾಲಯ ಕಲಾಪಗಳಿಂದ ಬಹಿಷ್ಕರಿಸದಂತೆ, ಕಕ್ಷಿದಾರರಿಗೆ ಪರಿಹಾರ ನೀಡುವ ವಿಚಾರ ಹಾಗೂ ಇತರ ಅನೇಕ ವಿಚಾರಗಳು ಚಾಲ್ತಿಯಲ್ಲಿರುವ ಕಾನೂನಿಗೆ ತದ್ವಿರುದ್ಧವಾಗಿರುತ್ತದೆ. ತಿದ್ದುಪಡಿ ಮಸೂದೆಯನ್ನು ಭಾರತೀಯ ಲಾ ಕಮಿಷನ್ ವತಿಯಿಂದ ಶಿಫಾರಸ್ಸು ಮಾಡಲಾಗಿದ್ದು, ಮಸೂದೆಯನ್ನು ಸಂಸತ್ತಿನಲ್ಲಿ ಜಾರಿ ಮಾಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿಯ ವಕೀಲರು ನ್ಯಾಯಾಲಯದ ಮುಂದೆ ದಿಢೀರಾಗಿ ಹಾಜರಾಗಿ ಕರಡು ತಿದ್ದುಪಡಿ ಮಸೂದೆಯನ್ನು ಹರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು ಎಂದು ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್, ಕಾರ್ಯದರ್ಶಿ ಪಿ.ಯು. ಪ್ರೀತಮ್ ತಿಳಿಸಿದರು. ಈ ಸಂದರ್ಭ ಉಪಾಧ್ಯಕ್ಷ ಕೆ.ಡಿ. ದಯಾನಂದ, ಖಜಾಂಚಿ ಕೆ.ಎಸ್. ತಮ್ಮಯ್ಯ, ಉಪಕಾರ್ಯದರ್ಶಿಗಳಾದ ಬಿ.ಸಿ. ಪೂವಯ್ಯ, ನಿರ್ದೇಶಕರುಗಳಾದ ಎಂ.ಕೆ. ಶರತ್, ಎ.ಎ. ಪೆಮ್ಮಯ್ಯ, ಬಿ.ಡಿ. ಕಪಿಲ್ ಕುಮಾರ್, ಬಿ.ಸಿ. ದೇವಿಪ್ರಸಾದ್, ಎಂ.ಕೆ. ಅರುಣ್ ಕುಮಾರ್ ಎಂ.ವಿ. ಸಂಜಯ್ ರಾಜ್, ಬಿ.ಎಸ್. ರುದ್ರಪ್ರಸನ್ನ ಮತ್ತು ಕೆ. ನಳಿನಿ ಪೊನ್ನಪ್ಪ ಹಾಗೂ ವಕೀಲರ ಸಂಘದ ಸದಸ್ಯರು ಹಾಜರಿದ್ದರು.