ಸೋಮವಾರಪೇಟೆ,ಏ.21: ಮಲೆನಾಡಿನ ಮಡಿಲಲ್ಲೀಗ ಸುಗ್ಗಿ ಹಬ್ಬದ ಸಂಭ್ರಮವೋ ಸಂಭ್ರಮ. ತೋಳೂರುಶೆಟ್ಟಳ್ಳಿ, ಹಾನಗಲ್ಲು ಶೆಟ್ಟಳ್ಳಿ, ನಗರಳ್ಳಿ ಸೇರಿದಂತೆ ಇನ್ನಿತರ ಪ್ರಮುಖ ಗ್ರಾಮಗಳಲ್ಲಿ ಸುಗ್ಗಿಯ ಕಟ್ಟುಪಾಡುಗಳು ಚಾಲ್ತಿಯಲ್ಲಿವೆ. ನಗರಳ್ಳಿ ಸುಗ್ಗಿಗೆ ವೈಭವದ ತೆರೆ ಬಿದ್ದಿದ್ದು, ಇಂದು ಚೌಡ್ಲು ಗ್ರಾಮದ ದೊಡ್ಡ ಸುಗ್ಗಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಮೇಳೈಸಿತು.

ಸಾಧಾರಣವಾಗಿ ಎಲ್ಲಾ ಗ್ರಾಮಗಳ ಸುಗ್ಗಿಗಳು ಪ್ರತಿವರ್ಷ ನಡೆದರೆ, ಚೌಡ್ಲುವಿನ ಸುಗ್ಗಿ 2 ವರ್ಷಗಳಿಗೊಮ್ಮೆ ಮಾತ್ರ ನಡೆಯುತ್ತದೆ. ಒಂದು ವಾರಗಳ ಕಾಲ ನಡೆಯುವ ಸುಗ್ಗಿ ಉತ್ಸವದಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದಂತಹ ಆಚರಣೆಗಳು ಜರುಗುತ್ತವೆ.

ಚೌಡ್ಲು, ಕಿಬ್ಬೆಟ್ಟ, ಕರ್ಕಳ್ಳಿ ಮತ್ತು ನಗರೂರು ವ್ಯಾಪ್ತಿಗೆ ಒಳಪಡುವ ಚೌಡ್ಲು ಸುಗ್ಗಿಯಲ್ಲಿ ಹಳೆ ತಲೆಮಾರಿನ ವಿವಾಹ ಸಂದರ್ಭದ ಆಚರಣೆಗಳಿಗೆ ಹೆಚ್ಚಿನ ಮಹತ್ವ ನೀಡುವದು ವಿಶೇಷ. ನಗರೂರು ಗ್ರಾಮದಲ್ಲಿರುವ ಸುಗ್ಗಿಕಟ್ಟೆಯಿಂದ ಅದೇ ಗ್ರಾಮದ ಯುವಕನಿಗೆ ವಧುವಿನ ರೂಪ ಕೊಟ್ಟು, ಅಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಂತರ ದಿಬ್ಬಣದೊಂದಿಗೆ ವರನ ಊರಾದ ಚೌಡ್ಲು ಗ್ರಾಮಕ್ಕೆ ಮೆರವಣಿಗೆ ಬರುವದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದ್ದು, ಈಗಿನ ತಲೆಮಾರು ಸಹ ಈ ಆಚರಣೆಯನ್ನು ಮುಂದುವರೆಸಿಕೊಂಡು ಬಂದಿದೆ.

ಸುಗ್ಗಿ ಪ್ರಾರಂಭದಿಂದಲೂ ಅನೇಕ ಕಟ್ಟುಪಾಡುಗಳನ್ನು ಅಳವಡಿಸಿಕೊಂಡು ಗ್ರಾಮ ದೇವತೆ ಸಬ್ಬಮ್ಮ ತಾಯಿಯನ್ನು ಭಕ್ತಿಭಾವದಿಂದ ಪೂಜಿಸುವ, ದೈವೀ ಕಾರ್ಯ ನೆರವೇರಿಸುವ ಮಂದಿ ವಿಶೇಷವಾಗಿ ಸುಗ್ಗಿಯಲ್ಲಿ ಪ್ರಾಧಾನ್ಯತೆ ಪಡೆಯುವರು.

ಎರಡು ವರ್ಷಗಳಿಗೊಮ್ಮೆ ನಡೆಯುವಸುಗ್ಗಿ ವಿಶೇಷತೆಗಳಿಂದ ಕೂಡಿದ್ದು, ವಧುವಿನ ರೂಪದಲ್ಲಿದ್ದ ನಗರೂರಿನ ಹರೀಶ್ ಅವರನ್ನು ದಿಬ್ಬಣದ ಮೂಲಕ ಗ್ರಾಮಸ್ಥರು ಮೆರವಣಿಗೆಯಲ್ಲಿ ಚೌಡ್ಲು ಗ್ರಾಮಕ್ಕೆ ಕರೆತಂದರು. ವರನ ರೂಪದಲ್ಲಿದ್ದ ಚಂದ್ರಾಜು ಅವರ ಕುಟುಂಬ ಸದಸ್ಯರಂತೆ ಚೌಡ್ಲು ಗ್ರಾಮದವರು ವಧುವಿನ ಕಡೆಯವರನ್ನು ಬರಮಾಡಿಕೊಂಡು ಸಬ್ಬಮ್ಮ ದೇವಿಯ ಸನ್ನಿಧಿಯಲ್ಲಿ ಧಾನ್ಯ ಬಿತ್ತನೆ ಮಾಡಿದರು.

ಕರ್ಕಳ್ಳಿ ಹಾಗೂ ಕಿಬ್ಬೆಟ್ಟ ಗ್ರಾಮಗಳಿಂದಲೂ ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಪ್ರಧಾನ ದೇವಾಲಯವಾದ ಚೌಡ್ಲು ಸಬ್ಬಮ್ಮ ದೇವಿ ದೇವಸ್ಥಾನಕ್ಕೆ ವಾಲಗದೊಂದಿಗೆ ಮೆರವಣಿಗೆಯಲ್ಲಿ ತೆರಳಿದರು.

ಇಲ್ಲಿ ಸಮಾಗಮಗೊಂಡ ನಂತರ ನಾಲ್ಕೂ ಗ್ರಾಮಗಳ ಮಂದಿ ಸಬ್ಬಮ್ಮ ದೇವಿಯಲ್ಲಿ ಗ್ರಾಮದ ಸುಭೀಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಸುಗ್ಗಿ ಬನದಲ್ಲಿ ಗ್ರಾಮದ ವಯೋವೃದ್ಧರಿಂದ ಹಿಡಿದು ಪುಟಾಣಿ ಮಕ್ಕಳ ಸಹಿತ ಮಹಿಳೆಯರು, ಪುರುಷರು, ಯುವ ಜನಾಂಗದವರು ಸಾಂಪ್ರದಾಯಿಕ ಸುಗ್ಗಿ ವಾಲಗಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು.

ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಚೌಡ್ಲು ಸುಗ್ಗಿಯಲ್ಲಿ ದಿನಂಪ್ರತಿ ವಿವಿಧ ಸಾಂಪ್ರದಾಯಿಕ ಆಚರಣೆಗಳು ಜರುಗಿದವು. ಸುಗ್ಗಿ ಕಂಬದಲ್ಲಿ ಉಯಿಲು ತೂಗುವದು, ಮಳೆ ಕರೆಯುವದು, ಬಿತ್ತನೆ ಮಾಡುವದು ಸೇರಿದಂತೆ ಇತರ ಪೂಜಾ ವಿಧಿವಿಧಾನಗಳು ನೆರವೇರಿದವು.

ಸುಗ್ಗಿ ಉತ್ಸವದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಮಹೇಶ್, ಪ್ರಮುಖರಾದ ನಂದಕಿಶೋರ್, ಲಿಂಗರಾಜು, ಸಿ.ಕೆ. ವೀರೇಶ್, ಸಿ.ಎಸ್. ಕುಟ್ಟಪ್ಪ ಸೇರಿದಂತೆ ಇತರರು ಸುಗ್ಗಿಯ ಉಸ್ತುವಾರಿ ವಹಿಸಿದ್ದರು. ಪ್ರಸಕ್ತ ಸಾಲಿನ ಉತ್ಸವಕ್ಕೆ ತಾ. 23ರಂದು ತೆರೆ ಬೀಳಲಿದೆ.