ಮಡಿಕೇರಿ, ಏ. 21: ಹರಿಯಾಣದ ರೋಥಕ್‍ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್‍ಶಿಪ್ (ಬಿ.ಡಿವಿಜನ್)ನಲ್ಲಿ ಸೆಮಿಫೈನಲ್ ಹಂತಕ್ಕೆ ತಲಪಿ ಪದಕದ ಆಸೆ ಮೂಡಿಸಿದ್ದ ಹಾಕಿ ಕೂರ್ಗ್ ಮಹಿಳಾ ತಂಡಕ್ಕೆ ನಿರಾಶೆಯಾಗಿದೆ. ಇಂದು ನಡೆದ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಹಿಮ್ ಹಾಕಿ ಅಕಾಡೆಮಿ ವಿರುದ್ಧ ಆಡಿದ ಹಾಕಿ ಕೂರ್ಗ್ ಮಹಿಳಾ ಆಟಗಾರ್ತಿಯರು ವೀರೋಚಿತ ಸೋಲು ಅನುಭವಿಸಿದೆ. ಬಲಿಷ್ಠ ತಂಡದ ವಿರುದ್ಧ ಕೊಡಗಿನ ಆಟಗಾರರು ಉತ್ತಮ ಆಟದ ಪ್ರದರ್ಶನ ನೀಡಿದರಾದರೂ, ವಿಜಯ ಸಾಧಿಸುವಲ್ಲಿ ವಿಫಲರಾದರು. ಸಮಬಲದ ಹೋರಾಟದ ನಡುವೆ ಹಿಮ್ ಹಾಕಿ ಅಕಾಡೆಮಿ ಎದುರು ಕೊಡಗು ತಂಡ 1-2 ಗೋಲಿನ ಅಂತರದಿಂದ ಪರಾಭವಗೊಂಡಿತು. ಹಾಕಿ ಕೂರ್ಗ್ ಪರ ತಂಡದ ನಾಯಕಿ ಕಳ್ಳಿಚಂಡ ಟೀನಾ ಗೋಲು ಬಾರಿಸಿದರು. ಮೂರನೇ ಸ್ಥಾನದೊಂದಿಗೆ ಕಂಚಿನ ಪದಕಕ್ಕಾಗಿ ತಾ. 22ರಂದು (ಇಂದು) ಪಂದ್ಯಾಟ ನಡೆಯಲಿದ್ದು, ಹಾಕಿ ಕೂರ್ಗ್ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.

ಹಿಮ್ ಹಾಕಿ ಅಕಾಡೆಮಿ ತಂಡ ಜೂನಿಯರ್ ಇಂಡಿಯಾ ತಂಡವನ್ನು ಪ್ರತಿನಿಧಿಸುತ್ತಿರುವ ಹಲವು ಆಟಗಾರ್ತಿಯರನ್ನು ಹೊಂದಿತ್ತು. ಆದರೂ ಕೊಡಗು ತಂಡ ಉತ್ತಮ ಪ್ರದರ್ಶನ ನೀಡಿದೆ. ಮೂರನೇ ಸ್ಥಾನದ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಹಾಕಿ ಕೂರ್ಗ್ ಪದಾಧಿಕಾರಿಗಳು ತಿಳಿಸಿದ್ದಾರೆ.