ಶ್ರೀಮಂಗಲ, ಏ. 21: ಜಿಲ್ಲೆಯ ರೈತರು-ಬೆಳೆಗಾರರಲ್ಲಿ ಕಾರ್ಮಿಕರು ಜೀತದಾರರಾಗಿದ್ದಾರೆ, ಬೆಳೆಗಾರರಿಂದ ಪಡೆದ ಸಾಲವನ್ನು ಮರುಪಾವತಿ ಮಾಡಬೇಡಿ, ಸಾಲ ಕೇಳಿದರೆ ಕ್ರಿಮಿನಲ್ ಮೊಕದ್ದಮೆಯನ್ನು ಬೆಳೆಗಾರರ ಮೇಲೆ ಹಾಕಿ ಎಂದು ಹೇಳಿಕೆ ನೀಡಿ ಬೆಳೆಗಾರರು ಮತ್ತು ಕಾರ್ಮಿಕರ ನಡುವೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹುಳಿಹಿಂಡುವ ಪ್ರಯತ್ನ ಮಾಡಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ ಆದೇಶಿಸಿದ್ದಾರೆ.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು,ಕಂದಾಯ ಸಚಿವರು ಪೂರ್ವಾಗ್ರಹ ಪೀಡಿತರಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿರುವದು ಬೆಳೆಗಾರರ ಸ್ವಾಭಿಮಾನಕ್ಕೆ ದಕ್ಕೆ ತರುವಂತದ್ದು ಎಂದು ಕಿಡಿಕಾರಿದರು.

ಪ್ರತಿ ತಿಂಗಳು ವಿಲೆವಾರಿ ಆದ ಅರ್ಜಿ, ಬಾಕಿ ಉಳಿದ ಅರ್ಜಿ, ಬಾಕಿ ಉಳಿದಿರುವದಕ್ಕೆ ಸಕಾರಣದ ಬಗ್ಗೆ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸುವಂತಾಗಬೇಕು. ಪ್ರತಿ ತಾಲೂಕಿಗೆ ಎ.ಡಿ.ಎಲ್.ಆರ್. ನೇಮಿಸಬೇಕು. ಡಿ.ಡಿ.ಎಲ್.ಆರ್. ಸಹ ನಿರ್ದಿಷ್ಟ ದಿನ ಲಭ್ಯವಿರುವಂತೆ ಮಾಡಿ ಕಂದಾಯ ಇಲಾಖೆಯ ಕಾರ್ಯವೈಖರಿಯನ್ನು ಚುರುಕುಗೊಳಿಸಿ ಭ್ರಷ್ಟಾಚಾರ ಮುಕ್ತಗೊಳಿಸಲು ಸಚಿವರು ಮುಂದಾಗಲಿ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಸದಸ್ಯ ಮಲ್ಲಮಾಡ ಪ್ರಭುಪೂಣಚ್ಚ ಮಾತನಾಡಿ, ಕಂದಾಯ ಇಲಾಖೆಯಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಲು ವಿಫಲವಾಗಿರುವ ಸಚಿವ ಕಾಗೋಡು ತಿಮ್ಮಪ್ಪ ಅವರು, ಜಿಲ್ಲೆಯಲ್ಲಿ ಜೀತಪದ್ದತಿ ಬಗ್ಗೆ ವಾಸ್ತವಾಂಶ ಅರಿವಿಲ್ಲದೆ ಕೆಲವು ನಕ್ಸಲ್ ಬೆಂಬಲಿಗರ ಒತ್ತಡಕ್ಕೆ ಮಣಿದು ನೀಡಿರುವ ಹೇಳಿಕೆ ಖಂಡನೀಯ. ಜಿಲ್ಲೆಯಲ್ಲಿ ಜೀತ ಪದ್ದತಿ ಹಾಗೂ ಕನಿಷ್ಟ ಕೂಲಿ ಮತ್ತು ಕಿರುಕುಳ ಇದ್ದಿದ್ದರೆ ಅಸ್ಸಾಂ ಹಾಗೂ ಇತರ ಭಾಗದಿಂದ ಕಾರ್ಮಿಕರು ಜಿಲ್ಲೆಗೆ ಬರುತ್ತಿರಲಿಲ್ಲ. ಅಸ್ಸಾಂ ಕಾರ್ಮಿಕರು ಜಿಲ್ಲೆಯಲ್ಲಿ ಲಭ್ಯವಿದ್ದರೂ ಹಿಂದಿನಿಂದಲೇ ಕಾರ್ಮಿಕರಾಗಿರುವ ಸ್ಥಳೀಯ ಕಾರ್ಮಿಕರನ್ನು ಬೆಳೆಗಾರರು ಕೈಬಿಟ್ಟಿಲ್ಲ. ಕಾಫಿ ಬೆಳೆಗಾರರು ಎಷ್ಟೇ ಕಷ್ಟ ನಷ್ಟ ಅನುಭವಿಸುತ್ತಿದ್ದರೂ ಕಾರ್ಮಿಕರಿಗೆ ವೇತನ ಸೌಲಭ್ಯವನ್ನು ನೀಡುತ್ತಾ ಬಂದಿದ್ದಾರೆ. ಇದನ್ನು ಸಚಿವರು ಮನಗಾಣಬೇಕೆಂದು ಹೇಳಿದರು.

ವೀರಾಜಪೇಟೆ ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಮುಕ್ಕಾಟಿರ ಪ್ರವೀಣ್ ಮಾತನಾಡಿ, ಸಚಿವ ಕಾಗೋಡು ತಿಮ್ಮಪ್ಪ ಅವರು ಸಚಿವ ಸ್ಥಾನ ಉಳಿಸಿಕೊಳ್ಳಲು ಸರಕಾರದ ಪರ ವಾಸ್ತವಾಂಶದ ಅರಿವಿಲ್ಲದೆ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರ ಇದೇ ರೀತಿಯ ಕಾರ್ಯವೈಖರಿ ಮುಂದುವರಿದರೆ ಅವರು ಜಿಲ್ಲೆಗೆ ಆಗಮಿಸುವ ಸಂಧರ್ಭ ಕಪ್ಪು ಬಾವುಟ ಪ್ರದರ್ಶಿಸಲಾಗುವದು ಎಂದರು.

ಸಭೆಯಲ್ಲಿ ಕಿಸಾನ್ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನೂರೇರ ಮನೋಜ್, ಯುವ ಪ್ರಮುಖ ದೇಯಂಡ ರತನ್ ಬೋಪಣ್ಣ ಹಾಜರಿದ್ದರು.