ವೀರಾಜಪೇಟೆ, ಏ. 21 : ಪ್ರತಿಯೊಬ್ಬ ಆಸಕ್ತ ಕ್ರೀಡಾ ಪ್ರೇಮಿಗಳು ಕ್ರೀಡಾಕೂಟಗಳಲ್ಲಿ ಭಾಗಿಯಾಗುವದರಿಂದ ಮನರಂಜನೆ, ಮನಸ್ಸಿಗೆ ಉಲ್ಲಾಸ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮದುಲೈಮುತ್ತು ಹೇಳಿದರು.ಸಂತ ಅನ್ನಮ್ಮ ದೇವಾಲಯದ ವತಿಯಿಂದ ಹಮ್ಮಿಕೊಂಡಿದ್ದ ರೋಮನ್ ಕ್ಯಾಥೋಲಿಕ್ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿದ ಮದುಲೈಮುತ್ತು ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಿರುವ ಕ್ರಿಕೆಟ್ ಪಂದ್ಯಾಟವನ್ನು ಗ್ರಾಮಾಂತರ ಪ್ರದೇಶಗಳಲ್ಲಿಯೂ ಆಯೋಜಿಸುವದರಿಂದ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸಲು ಸಾಧ್ಯವಾಗುವದು ಎಂದರು.

ವಿದ್ಯಾಸಂಸ್ಥೆಯ ಮೈದಾನದಲ್ಲಿ ಆಯೋಜಿಸಲಾದ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಆರ್ಜಿ ಸಂತ ಅಂತೋಣಿ ದೇವಾಲಯದ ಧರ್ಮಗರು ಜಾನ್ ಪೀಟರ್ ರೆಗೋ, ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಸಹಾಯಕ ಗುರು ಟೆನ್ನಿ ಕುರಿಯನ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಸಂಘದ ಅಧ್ಯಕ್ಷ ಆಗಸ್ಟಿನ್ ಜಯರಾಜ್ ಹಾಗೂ ವೀರಾಜಪೇಟೆ ಸಂತ ಜೋಸೆಫ್ ಕನ್ಯಾಸ್ತ್ರಿ ಮಠದ ಶ್ರೇಷ್ಠ ಕನ್ಯಾಸ್ತ್ರಿ ಜಾನೆಟ್ ಪಾಲ್ಗೊಂಡಿದ್ದರು.ಕ್ರಿಕೆಟ್ ಪಂದ್ಯಾಟ ತಾ. 23ರವರೆಗೆ ನಡೆಯಲಿದ್ದು, ಭಾನುವಾರ ಅಪರಾಹ್ನ ಸಮಾರೋಪಗೊಳ್ಳಲಿದೆ. ಸಮಾರಂಭದಲ್ಲಿ ಕ್ರೀಡಾ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.