ಮಡಿಕೇರಿ, ಏ. 21: ಸಹಕಾರಿಗಳೂ ತಮ್ಮಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಕಾರ್ಯದಲ್ಲಿ ಬದ್ಧತೆಯಾಗುತ್ತದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.ಕೊಡಗು ಜಿಲ್ಲಾ ಸಹಕಾರ ಭಾರತಿ ಹಾಗೂ ಸಹಕಾರ ಒಕ್ಕೂಟದ ಸಹಯೋಗದಲ್ಲಿ ನಗರದ ಬಾಲಭವನದಲ್ಲಿ ನಡೆದ ಸಹಕಾರಿಗಳ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಶೇ. 90ರಷ್ಟು ಸಹಕಾರಿ ಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿದ್ದು, ಸಹಕಾರ ಕ್ಷೇತ್ರವನ್ನು ಉಳಿಸಿ ಇನ್ನಷ್ಟು ಅಭಿವೃದ್ಧಿಪಡಿಸುವದು ಸಹಕಾರಿಗಳ ಧ್ಯೇಯವಾಗಬೇಕು. ಸಂಘ ಪರಿವಾರದ ಸಹಕಾರಿ ಭಾರತಿ ಹಿನ್ನೆಲೆಯೊಳಗೆ ನಾವೆಲ್ಲ ಕೆಲಸ ಮಾಡುವಂತಾಗಬೇಕು. ಸಹಕಾರ ಭಾರತೀಯ ಮೂಲ ಉದ್ದೇಶವೇ ರಾಷ್ಟ್ರೀಯತೆಯೊಂದಿಗೆ ಸಹಕಾರಿಗಳ ಬಲವರ್ಧನೆ ಎಂದು ಹೇಳಿದರು.

ಸಹಕಾರ ಭಾರತಿ ರಾಜ್ಯ ಸಹ ಸಂಚಾಲಕ ಕೆ. ಪ್ರಸನ್ನ ಮಾತನಾಡಿ, ರಾಜಕೀಯ ಕ್ಷೇತ್ರಕ್ಕೆ ಕಾಲಿಡಬೇಕಾದರೆ ಸಹಕಾರ ಕ್ಷೇತ್ರ ಮೆಟ್ಟಿಲು ಮತ್ತು ತೊಟ್ಟಿಲು ಎಂಬ ಮಾತಿದೆ. ಸಹಕಾರ ಕ್ಷೇತ್ರದ ಚಟುವಟಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅಭ್ಯಾಸ ವರ್ಗವನ್ನು ಆಯೋಜಿಸಿದ್ದು, ಸಹಕಾರಿಗಳಿಗೆ ಸಂಸ್ಕಾರಪೂರಿತ ಶಿಕ್ಷಣದ ಅಗತ್ಯವಿದೆ. ವ್ಯಕ್ತಿ ವ್ಯಕ್ತಿಗಳೂ ಉದ್ಧಾರವಾಗಬೇಕಾದರೆ ಸಂಸ್ಕಾರ ಅಗತ್ಯ ಎಂದ ಅವರು ಹಿರಿಯರು - ಕಿರಿಯರು ಬೆರೆತು ಒಳ್ಳೆಯ ವಿಷಯಗಳನ್ನು ಸದುದ್ದೇಶದಿಂದ ಹಂಚಿಕೊಳ್ಳುವ ಸಲುವಾಗಿ ಅಭ್ಯಾಸ ವರ್ಗಗಳ ಅಗತ್ಯವಿದೆ. ಸಹಕಾರಿ ಕ್ಷೇತ್ರದಲ್ಲಿ ಓರ್ವನೇ 10-15 ವರ್ಷಗಳ ಕಾಲ ನಿರ್ದೇಶಕ ಹಾಗೂ ಅಧ್ಯಕ್ಷನಾಗಿ ಅಧಿಕಾರ ನಡೆಸುವ ಬದಲು ಹೊಸಬರನ್ನು ಕ್ಷೇತ್ರದಲ್ಲಿ ಕರೆ ತರಬೇಕಾಗಿದೆ. ಹೊಸಬರ ಯೋಚನೆಗಳನ್ನು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದರು.

ಸಹಕಾರ ಕ್ಷೇತ್ರದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಆಚಾರ್ಯ ಮಾತನಾಡಿ ಇಡೀ ದೇಶದಲ್ಲಿ ಅಸಂಘಟಿತ ಕ್ಷೇತ್ರವೆಂದರೆ ಅದು ಸಹಕಾರ ಕ್ಷೇತ್ರ ಮಾತ್ರ. ಜಿಲ್ಲೆಯಲ್ಲಿ ಜನಸಂಖ್ಯೆಯ ಶೇ.40ರಷ್ಟು ಮಂದಿ ಸಹಕಾರಿಗಳಿದ್ದಾರೆ. ಆದರೂ ಸಹಕಾರಿಗಳು ಸಂಘಟಿತರಾಗಬೇಕೆನ್ನುವದು ಯಾರಲ್ಲೂ ಮೂಡದಿರುವದು ವಿಷಾದನೀಯ ಎಂದ ಅವರು, ಸಂಘಟನೆಯ ಅರಿವು ಮೂಡಿದ್ದರೆ ಸಹಕಾರಿಗಳ ಸಾಮಥ್ರ್ಯದ ಅರಿವು ಆಗುತ್ತಿತ್ತು. ಸಹಕಾರಿಗಳ ಪರವಾಗಿ ಕಾರ್ಯನಿರ್ವಹಿಸುವ ದೇಶದ ಏಕೈಕ ಸಂಘಟನೆ ಸಹಕಾರ ಭಾರತಿ ಆಗಿದೆ. ಪ್ರತಿಯೊಬ್ಬರಲ್ಲೂ ಸಹಕಾರ ಭಾವನೆ ಮೂಡಿಸುವ ನಿಟ್ಟಿನಲ್ಲಿ ಅಭ್ಯಾಸ ವರ್ಗ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ, ಕೆ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಸಹಕಾರ ಭಾರತಿ ರಾಜ್ಯ ಸಂಚಾಲಕ ಸತೀಶ್ ಚಂದ್ರ ಮಾತನಾಡಿದರು.

ಅಭ್ಯಾಸ ವರ್ಗದಲ್ಲಿ ಜಿಲ್ಲೆಯ ಹಲವು ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಇದ್ದರು.ಸಹಕಾರ ಭಾರತಿ ಜಿಲ್ಲಾ ಸಂಚಾಲಕ ಎನ್.ಎ. ರವಿಬಸಪ್ಪ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.