ಮಡಿಕೇರಿ, ಏ. 21: ಹತ್ತು ಕುಟುಂಬ ಹದಿನೆಂಟು ಗೊತ್ರದ ಗೌಡ ಜನಾಂಗ ಬಾಂಧವರ ಪೈಕೇರ ಕ್ರಿಕೆಟ್ ಕಪ್ ಉತ್ಸವಕ್ಕೆ ಇಂದು ವರ್ಣರಂಜಿತ ಚಾಲನೆ ದೊರಕಿತು. ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸ್ವಾಮೀಜಿಗಳು, ಗಣ್ಯರು, ಜನಾಂಗ ಬಾಂಧವರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.ಕ್ರೀಡಾಕೂಟದ ಅಂಗವಾಗಿ ಅಂತರಾಷ್ಟ್ರೀಯ ಮ್ಯಾರಥಾನ್ ಓಟಗಾರÀ ಹೊಸೋಕ್ಲು ಚಿಣ್ಣಪ್ಪ ಹಾಗೂ ರಾಷ್ಟ್ರೀಯ ಗುಡ್ಡಗಾಡು ಓಟಗಾರ ಕುಕ್ಕೇರ ಲಕ್ಷ್ಮಣ್ ನೇತೃತ್ವದ ತಂಡದವರು ಬೆಳಿಗ್ಗೆ ಶ್ರೀ ಓಂಕಾರೇಶ್ವರ ದೇವಾಲಯದಿಂದ ಕ್ರೀಡಾ ಜ್ಯೋತಿಯೊಂದಿಗೆ ಫೀ.ಮಾ. ಕಾರ್ಯಪ್ಪ ವೃತ್ತಕ್ಕೆ ತೆರಳಿ ಅಲ್ಲಿ ಕಾರ್ಯಪ್ಪ ಹಾಗೂ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಗಳಿಗೆ ಮಾಲಾರ್ಪಣೆಯೊಂದಿಗೆ ಮುಖ್ಯ ಬೀದಿಯಲ್ಲಿ ಸಾಗಿ ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತಂದ ಬಳಿಕ ಆದಿಚುಂಚನಗಿರಿ ಮಠದ ಕೊಡಗು - ಹಾಸನ ಶಾಖೆಯ ಮಠಾಧಿಪತಿ ಶಂಭುನಾಥ ಸ್ವಾಮೀಜಿ ಹಾಗೂ ಅತಿಥಿಗಳು ಕ್ರೀಡಾಜ್ಯೋತಿಯನ್ನು ಬೆಳಗುವದರ ಮೂಲಕ ಚಾಲನೆ ನೀಡಿದರು.

ಇದಕ್ಕೆ ಮುನ್ನ ಸ್ವಾಮೀಜಿ ಹಾಗೂ ಅತಿಥಿಗಳನ್ನು ಮೈದಾನದ ಬಳಿಯಿಂದ ವೇದಿಕೆಯವರೆಗೆ ಕಳಸ ಹೊತ್ತ ಪೈಕೇರ ಕುಟುಂಬ ಹಾಗೂ ಯುವ ವೇದಿಕೆ ಮತ್ತು ಸಾಂಪ್ರದಾಯಿಕ ಉಡುಪಿನಲ್ಲಿದ್ದ ಮಹಿಳೆಯರು ಹಾಗೂ ಪುರುಷರು ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆ ತರಲಾಯಿತು. ಪೈಕೇರ ಕುಟುಂಬಸ್ಥರ ಪರವಾಗಿ ಪೈಕೇರ ಮನೋಹರ್ ಹಾಗೂ ಸುಚಿತ್ರ ದಂಪತಿ ಸ್ವಾಮೀಜಿಯ ಪಾದಪೂಜೆ ಮಾಡಿದ ನಂತರ ಸ್ವಾಮೀಜಿಯವರನ್ನು ಪೈಕೇರ ಕುಟುಂಬಸ್ಥರು ಹಾಗೂ ಯುವ ವೇದಿಕೆ ಪರವಾಗಿ ಗೌರವಿಸಲಾಯಿತು.

ಸಾಂಪ್ರದಾಯಿಕ ವಾಲಗ ಹಾಗೂ ಜನಪದ ಸಂಸ್ಕøತಿಯ ಡೊಳ್ಳುಕುಣಿತ ಮೆರವಣಿಗೆಯನ್ನು ಮುನ್ನಡೆಸಿತು. ಪೈಕೇರ ಕುಟುಂಬಸ್ಥರ ಪುಟಾಣಿಗಳ ಪ್ರಾರ್ಥನೆ, ಸ್ವಾಗತ ಗೀತೆ, ಯುವ ವೇದಿಕೆಯ ಪುಟಾಣಿಗಳ ಸ್ವಾಗತ ನೃತ್ಯ ಗಮನ ಸೆಳೆಯಿತು.

(ಮೊದಲ ಪುಟದಿಂದ) ನಂತರ ಸಮಾರಂಭವನ್ನು ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ದೇವರಗುಂಡ ಸದಾನಂದ ಗೌಡ ಉದ್ಘಾಟಿಸಿದರು.

ಸಮಾರಂಭದ ಬಳಿಕ ಆತಿಥೇಯ ಪೈಕೇರ ಹಾಗೂ ನೆರೆಮನೆ ಕಾಳೆಯಂಡ ಕುಟುಂಬ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯಾವಳಿಯನ್ನು ಮಾಜಿ ಮುಖ್ಯ

ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ 18ನೇ ವರ್ಷದ ಪಂದ್ಯಾವಳಿಯ ನೆನಪಿಗಾಗಿ 18 ಸುತ್ತು ಕುಶಲತೋಪು ಸಿಡಿಸಲಾಯಿತು. ಬಳಿಕ ನಡೆದ ಪ್ರದರ್ಶನ ಪಂದ್ಯದಲ್ಲಿ ಕಾಳೆಯಂಡ ತಂಡ ಜಯಗಳಿಸಿತು.

ದಾಖಲೆ ಎಂಬಂತೆ ಒಟ್ಟು 210 ಕುಟುಂಬ ತಂಡಗಳು ಪಾಲ್ಗೊಂಡಿರುವ ಪೈಕೇರ ಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನಾಂಗ ಬಾಂಧವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದಿತ್ತರು. ನೆರೆದಿದ್ದ ಸರ್ವರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೈಕೇರ ಕುಟುಂಬದ ಯುವಕರು, ಯುವ ವೇದಿಕೆ ಸದಸ್ಯರುಗಳು ಸ್ವಯಂ ಸೇವಕರಾಗಿ ತೊಡಗಿಸಿ ಕೊಂಡಿದ್ದಾರೆ. ಮೇ 7ರವರೆಗೆ 17 ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ.