ಸೋಮವಾರಪೇಟೆ,ಏ.21: ಇಲ್ಲಿನ ಹನಫಿ ಜಾಮಿಯಾ ಮಸೀದಿ ವತಿಯಿಂದ ಗುರುವಾರ ರಾತ್ರಿ ಉರೂಸ್ ಮಹೋತ್ಸವ ಶ್ರದ್ದಾ ಭಕ್ತಿಯಿಂದ ನಡೆಯಿತು. ಹನಫಿ ಜಾಮಿಯಾ ಮಸೀದಿಯ ಆವರಣದಲ್ಲಿ ಸಂಜೆ 7ಗಂಟೆಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ವಕ್ಫ್ ಬೋರ್ಡಿನ ಅಧ್ಯಕ್ಷರಾದ ಎಂ.ಎಚ್. ಅಬ್ದುಲ್ ರೆಹಮಾನ್ ಮಾತನಾಡಿ, ಸಮಾಜದಲ್ಲಿ ಯಾವದೇ ಧರ್ಮದ ಹಬ್ಬಹರಿದಿನಗಳು ಒಗ್ಗಟ್ಟಿನ ಪ್ರತೀಕವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಧ್ಯಪ್ರದೇಶದ ಧರ್ಮಗುರುಗಳಾದ ಲಿಯಾಕತ್ ರಜಾನೂರಿ ಸಾಹೇಬ್ ಮಾತನಾಡಿ, ಧಾರ್ಮಿಕ ಶಿಕ್ಷಣ ಮತ್ತು ಭೌದ್ಧಿಕ ಶಿಕ್ಷಣದ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಮುಸ್ಲಿಂ ಜನಾಂಗದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪ್ರತಿಯೊಬ್ಬರು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳು ವಂತಾಗಬೇಕು ಎಂದು ಕರೆ ನೀಡಿದರು.

ಪ್ರವಚನ ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಹನಫಿ ಜಾಮಿಯಾ ಮಸೀದಿಯ ಅಧ್ಯಕ್ಷ ಎಂ.ವೈ ಮುಕ್ರಂ ಬೇಗ್ ಬಾಬು, ಕಾರ್ಯದರ್ಶಿ ಯಾಸ್ಮೀನ್ ಪಾಶಾ, ಪದಾಧಿಕಾರಿ ಗಳಾದ ಚಾಂದ್, ಪ್ಯಾರು ಮತ್ತಿತರರು ಉಪಸ್ಥಿತರಿದ್ದರು.