ಮೂರ್ನಾಡು, ಏ. 21 : ಪಟ್ಟಣದಲ್ಲಿ ನಾಲ್ಕು ಅಂಗಡಿಗಳ ಶೆಟ್ಟರ್ ಅನ್ನು ಮೀಟಿ ಕಳ್ಳರು ಸರಣಿ ಕಳ್ಳತನ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಬಸ್ ನಿಲ್ದಾಣದಲ್ಲಿ ಗ್ರಾಮ ಪಂಚಾಯಿತಿ ಕಾಂಪ್ಲೆಕ್ಸ್‍ನಲ್ಲಿರುವ ಬ್ಲೂಬೆಲ್ ಚಪ್ಪಲಿ ಅಂಗಡಿಯ ಎರಡು ಮಳಿಗೆಯ ಶೆಟ್ಟರ್ ಅನ್ನು ಮೀಟಿ ಕಳ್ಳರು ಒಳ ನುಗ್ಗಿದ್ದಾರೆ. ಚಪ್ಪಲಿ ಅಂಗಡಿಯಲ್ಲಿ ಹಣ ದೊರಕದೆ ಹಿಂತಿರುಗಿದ್ದಾರೆ. ಭದ್ರಕಾಳಿ ಕಾಂಪ್ಲೆಕ್ಸ್‍ನಲ್ಲಿರುವ ನಾಣೂಸ್ ಬೇಕರಿಯ ಒಂದು ಬದಿಯ ಶೆಟ್ಟರ್ ಹಾಗೂ ಅದರ ಪಕ್ಕದಲ್ಲಿರುವ ಸೌಭಾಗ್ಯ ಮೆಡಿಕಲ್ಸ್‍ನ ಒಂದು ಬದಿಯ ಶೆಟ್ಟರ್ ಮೀಟಿ ಒಳ ನುಗ್ಗಲು ಸಾಧ್ಯವಾಗದೆ ಇನ್ನೊಂದು ಬದಿಯ ಶೆಟ್ಟರ್ ಮೀಟಿ ಒಳ ನುಗ್ಗಿ ಕಳ್ಳತನ ಮಾಡಿದ್ದಾರೆ. ನಾಣೂಸ್ ಬೇಕರಿಯಲ್ಲಿದ್ದ 20 ಸಾವಿರ ರೂಪಾಯಿ ಹಾಗೂ ಸೌಭಾಗ್ಯ ಮೆಡಿಕಲ್ಸ್‍ನಲ್ಲಿದ್ದ 8 ಸಾವಿರ ರೂಪಾಯಿಯನ್ನು ಕದ್ದೊಯ್ದಿದ್ದಾರೆ. ಹಣದಾಸೆಯಿಂದ ಕಳ್ಳತನ ನಡೆಸಿರುವ ಕಳ್ಳರು ನಾಲ್ಕು ಅಂಗಡಿಗಳಲ್ಲಿ ಇತರೆ ಯಾವದೇ ವಸ್ತುಗಳನ್ನು ಕದಿಯಲು ಯತ್ನಿಸಿಲ್ಲ.

ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಶಿವಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.