ಸೋಮವಾರಪೇಟೆ,ಏ.21: ಶುಭ ಸಮಾರಂಭ ಸೇರಿದಂತೆ ದಿನನಿತ್ಯದ ಉಪಯೋಗಕ್ಕೆ ಅಗತ್ಯವಾಗಿರುವ ಹೂವುಗಳನ್ನು ಮಾರಾಟ ಮಾಡುವ ಪಟ್ಟಣದ ವ್ಯಾಪಾರಿಗಳಿಗೆ ಒಂದು ನೆಲೆಯನ್ನು ಕಲ್ಪಿಸುವಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವಿಫಲವಾಗಿದೆ.ಕಳೆದ ಅನೇಕ ದಶಕಗಳಿಂದ ಸೋಮವಾರಪೇಟೆ ಪಟ್ಟಣದ ಹೃದಯ ಭಾಗವಾಗಿರುವ ಖಾಸಗಿ ಬಸ್ ನಿಲ್ದಾಣದ ಅಲ್ಲಲ್ಲಿ ಸಣ್ಣ ಸಣ್ಣ ಅಂಗಡಿಗಳನ್ನು ಮಾಡಿಕೊಂಡು ಹೂವಿನ ವ್ಯಾಪಾರ ಮಾಡಲಾಗುತ್ತಿತ್ತು. ನಂತರ ಹಳೆಯ ಕಟ್ಟಡ ಕೆಡವಿ ಖಾಸಗಿ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದ ನಂತರ ಹೂ ಮಾರಾಟಗಾರರು ಅತಂತ್ರರಾಗಿದ್ದಾರೆ.ಇದರಿಂದಾಗಿ ನಾಲ್ಕೈದು ಮಂದಿ ಹೂ ವ್ಯಾಪಾರಿಗಳು ಮತ್ತೊಬ್ಬರ ಅಂಗಡಿ ಎದುರು ಪೆಟ್ಟಿಗೆಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡು ವಂತಾಗಿದೆ. ಈರ್ವರು ವ್ಯಾಪಾರಿ ಗಳಂತೂ ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಯ ಒಂದನೇ ಅಂತಸ್ತಿಗೆ ತೆರಳುವ ಮೆಟ್ಟಿಲಿನ ಕೆಳಗೆ ವ್ಯಾಪಾರ ಮಾಡುತ್ತಿದ್ದಾರೆ.

ಹೂ ವ್ಯಾಪಾರಿಗಳಿಗೆ ಮತ್ತು ಸಾವಿರಾರು ರೂಪಾಯಿ ಮೌಲ್ಯದ ಹೂವುಗಳಿಗೆ ಯಾವದೇ ಭದ್ರತೆ ಇಲ್ಲದಂತಾಗಿದೆ. ಬಿಸಿಲಿನ ಬೇಗೆಯಲ್ಲಿ ಬೇಯುವ ವ್ಯಾಪಾರಿಗಳು ಮಳೆಗಾಲದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಅಳವಡಿಸಿ ಅದರ ಅಡಿಯಲ್ಲಿ ವ್ಯಾಪಾರ ನಡೆಸಬೇಕಾಗಿದೆ.

ಈ ಬಗ್ಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಹಲವಷ್ಟು ಬಾರಿ ಮನವಿ ಮಾಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಕೆಲ ವ್ಯಾಪಾರಸ್ಥರು ಪತ್ರಿಕೆ ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿ ಸದಸ್ಯರುಗಳು ಹೂ ವ್ಯಾಪಾರಿಗಳ ಬಗ್ಗೆ ಕರುಣೆ ತೋರಬೇಕಿದೆ. ನೆಮ್ಮದಿಯಿಂದ ವ್ಯಾಪಾರದಲ್ಲಿ ತೊಡಗಲು ಅವಕಾಶ ಕಲ್ಪಿಸಬೇಕಿದೆ. ಈ ಬಗ್ಗೆ ಆಡಳಿತ ಮಂಡಳಿ ಚಿಂತಿಸುತ್ತದೆಯೇ ಎಂಬದನ್ನು ಕಾದುನೋಡಬೇಕಿದೆ.