ಸೋಮವಾರಪೇಟೆ, ಏ. 24: ಆಧುನಿಕ ಭಾರತದ ನಿರ್ಮಾಪಕ ಹಾಗೂ ಸಂವಿಧಾನದ ಪಿತಾಮಹ ರಾದ ಅಂಬೇಡ್ಕರ್ ಅವರ ಆಶಯ ಗಳನ್ನು ಈಡೇರಿಸಲು ಯುವ ಜನಾಂಗ ಮುಂದಾಗಬೇಕೆಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ದೇವದಾಸ್ ಹೇಳಿದರು.

ಇಲ್ಲಿಗೆ ಸಮೀಪದ ಗಣಗೂರು ಗ್ರಾಮದ ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿ ವತಿಯಿಂದ ಶಾಲಾ ಮೈದಾನದಲ್ಲಿ ನಡೆದ ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಜೀವಿತದ ಅವಧಿಯಲ್ಲಿ ತಾವು ಅನುಭವಿಸಿದ ಕಷ್ಟ ದೀನ ದಲಿತರು ಹಾಗೂ ಅಶಕ್ತರಿಗೆ ಬರಬಾರದೆಂಬ ದೃಷ್ಟಿಯಿಂದ ಹೋರಾಡಿದ ಮಹಾನ್ ಚೇತನ ಅಂಬೇಡ್ಕರ್ ಎಂದ ಅವರು, ಡಾ. ಅಂಬೇಡ್ಕರ್ ವಿಚಾರಗಳನ್ನು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಾ|| ಸತೀಶ್ ಮಾತನಾಡಿ, ಅಂಬೇಡ್ಕರ್ ದೇಶದ ಎಲ್ಲ ಜನರು ಸಮಾನರಂತೆ ಬದುಕಲು ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇಂದಿನ ರಾಜಕಾರಣಿಗಳು ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ವಿಫಲರಾಗಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ಮುಖಂಡ ಜಯಪ್ಪ ಹಾನಗಲ್ ಮಾತನಾಡಿ, ಅಂಬೇಡ್ಕರ್ ನೀಡಿರುವ ಸ್ವಾತಂತ್ರ್ಯ, ಸಮಾನತೆಯ ಹಕ್ಕುಗಳನ್ನು ಪಡೆಯಲು ಎಲ್ಲರೂ ಮುಂದಾಗ ಬೇಕೆಂದರು. ವೇದಿಕೆಯಲ್ಲಿ ನಿವೃತ್ತ ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಎಚ್. ಜೆ. ಜವರ, ಉದ್ಯಮಿಗಳಾದ ನಾಪಂಡ ಮುತ್ತಪ್ಪ, ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ನಿರ್ವಾಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀನಿವಾಸ್, ವೃತ್ತ ನಿರೀಕ್ಷಕ ಪರಶಿವಮೂರ್ತಿ, ವಕೀಲ ಜಯೇಂದ್ರ, ತಾಲೂಕು ಪಂಚಾಯಿತಿ ಸದಸ್ಯೆ ಸವಿತಾ ಈರಪ್ಪ, ಗಣಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಹಾಗೂ ಸದಸ್ಯರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿಸಿಲ್ವ ಸೇರಿದಂತೆ ಹಲವರು ಉಪಸ್ಥಿತರಿ ದ್ದರು.