ವೀರಾಜಪೇಟೆ, ಏ. 24: ಕೊಡಗು ಮುಸ್ಲಿಂ ಸ್ಪೋಟ್ರ್ಸ್ ಆಂಡ್ ಕಲ್ಚರಲ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ 9ನೇ ವರ್ಷದ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾಟ ಇಂದು ಬೆಳಗ್ಗಿನ ಜಾವ ಮುಕ್ತಾಯಗೊಂಡಿತು.ಅತ್ಯಂತ ರೋಮಾಂಚನಕಾರಿಯಾಗಿ ನಡೆದ ಅಂತಿಮ ಪಂದ್ಯಾಟದಲ್ಲಿ ಎಡಪಾಲ ಸ್ಪೋಟ್ರ್ಸ್‍ಸ್ಟಾರ್ಸ್ ತಂಡ, ಬಲಿಷ್ಠ ಕರಿಕೆ ಗ್ರೀನ್ ಸ್ಟಾರ್ ತಂಡವನ್ನು 15-15 ಹಾಗೂ 12-11 ಅಂಕಗಳಿಂದ ಸೋಲಿಸಿ ಮುಸ್ಲಿಂ ಕಪ್ ಟ್ರೋಫಿಯನ್ನು ಪಡೆಯಿತು. ಲಿಮ್ರಾ ಕಡಂಗ ತಂಡ ಮೂರನೇ ಸ್ಥಾನವನ್ನು ಪಡೆಯಿತು.

ಅಂತಿಮ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಶಾಸಕ, ಮಾಜಿ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕೊಡಗು ಕ್ರೀಡೆಗಳ ತವರೂರು ಎನಿಸಿದ್ದರೂ ಕ್ರೀಡೆಗಳಿಗೆ ಇನ್ನೂ ಅಗತ್ಯದ ಪ್ರೋತ್ಸಾಹ ದೊರೆಯುತ್ತಿಲ್ಲ ಎಂಬದು ವಿಷಾದನೀಯ. ಹಾಗಿದ್ದರೂ ಲಭ್ಯವಿರುವ ಸೌಲಭ್ಯಗಳನ್ನು ಉಪಯೋಗಪಡಿಸಿಕೊಂಡು ವಾಲಿಬಾಲ್‍ನಂತಹ ಅಪ್ಪಟ್ಟ ದೇಶೀಯ ಕ್ರೀಡೆಗಳನ್ನು ಜೀವಂತವಿರಿಸಬೇಕು. ಹಾಕಿ ಹಾಗೂ ಕ್ರಿಕೆಟ್ ಕ್ರೀಡೆಗೆ ಒದಗಿಸುವ ಸೌಲಭ್ಯಗಳನ್ನು ಸರಕಾರ ಫುಟ್‍ಬಾಲ್ ಹಾಗೂ ವಾಲಿಬಾಲ್ ಕ್ರೀಡೆಗೂ ಒದಗಿಸುವಂತಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಗೆ ಒಂದು ಸುಸಜ್ಜಿತ ವಾಲಿಬಾಲ್ ಕ್ರೀಡಾಂಗಣಕ್ಕೆ ಸರಕಾರದೊಂದಿಗೆ ವ್ಯವಹರಿಸಲು ಪ್ರಯತ್ನಿಸಲಾಗುವದು. ಜನಾಂಗೀಯ ಕ್ರೀಡೆಗಳು ಜಿಲ್ಲೆಯನ್ನು ಇಡೀ ದೇಶದಲ್ಲೇ ವಿಭಿನ್ನ ಜಿಲ್ಲೆಯನ್ನಾಗಿಸಲು ಸಾಧ್ಯವಾಗಿದೆ. ಇಂದು ರಾಷ್ಟ್ರದ ಸಮಗ್ರತೆಯ ದೃಷ್ಟಿಯಿಂದ ಸಾಮರಸ್ಯದ ಬದುಕು ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೊಡಗು ಮುಸ್ಲಿಂ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎಂ.ಕುಂಞಬ್ದುಲ್ಲ ಮಾತನಾಡಿ ಮುಸ್ಲಿಂ ಯುವಕರು ಕ್ರೀಡೆ ಹಾಗೂ ಶಿಕ್ಷಣದಲ್ಲಿ ಮುಂದುವರಿದು ಮುಖ್ಯವಾಹಿನಿಗೆ ಬರಬೇಕು. ಎಲ್ಲಾ ಜನಾಂಗಗಳು ಪ್ರೀತಿ ಮತ್ತು ಸಾಮರಸ್ಯದಿಂದ ಬದುಕಬೇಕು ಎಂಬದು ಕ್ರೀಡೆಯ ಉದ್ದೇಶವಾಗಿದೆ ಎಂದರು. ಕೊಡಗು ಮುಸ್ಲಿಂ ಸಮಾಜದ ಕಾರ್ಯಾಧ್ಯಕ್ಷ ಪಿ.ಎಂ.ಖಾಸಿಂ, ಬೆಂಗಳೂರಿನ “ಕಿತ್ತಳೆನಾಡು” ವಾರಪತ್ರಿಕೆ ಸಂಪಾದಕ ಕೆ.ವೈ.ಹಂಝತುಲ್ಲ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂವೈ ಆಲಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಇ.ಸಿ.ಜೀವನ್, ಕ.ರಾ.ರ.ಸಾ.ನಿ. ನಿರ್ದೇಶಕ ಶೌಕತ್ ಅಲಿ, ಜನತಾದಳ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಮನ್ಸೂರ್ ಅಲಿ, ನಾಸಿರ್ ಮಕ್ಕಿ, ಕೊಟ್ಟಮುಡಿ ಹಂಝ, ಕೊಡಗು ಮುಸ್ಲಿಂ ಹಿತರಕ್ಷಣಾ ವೇದಿಕೆಯ ಪಿ.ಎ.ಹನೀಫ್, ಆರ್.ಕೆ.ಅಬ್ದುಲ್ ಸಲಾಂ ವೇದಿಕೆಯಲ್ಲಿದ್ದರು. ವಾಲಿಬಾಲ್ ಪಂದ್ಯಾಟದಲ್ಲಿ ಒಟ್ಟು 55 ತಂಡಗಳು ಭಾಗವಹಿಸಿದ್ದವು.

ಸಂಸ್ಥೆಯ ಕಾರ್ಯದರ್ಶಿ ಎಂ.ಎಂ.ಇಸ್ಮಾಈಲ್ ಸ್ವಾಗತಿಸಿದರು. ಶಾಫಿ ಉಸ್ತಾದ್ ಪ್ರಾರ್ಥಿಸಿದರು. ಎರಡು ದಿನಗಳ ಪಂದ್ಯಾಟವನ್ನು ವೀಕ್ಷಿಸಲು ಜಿಲ್ಲೆಯ ವಿವಿಧೆಡೆಗಳಿಂದ ಐದು ಸಾವಿರಕ್ಕೂ ಹೆಚ್ಚು ಕ್ರೀಡಾಭಿಮಾನಿಗಳು ಮಧ್ಯ ರಾತ್ರಿಯವರೆಗೂ ಕಿಕ್ಕಿರಿದು ಸೇರಿದ್ದರು.