ಕುಶಾಲನಗರ, ಏ. 24: ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಕ್ರಮ ಬಹುಮಹಡಿ ಕಟ್ಟಡಗಳ ತೆರವಿಗೆ ಜೆಸಿಬಿ ಘರ್ಜನೆ ಪ್ರಾರಂಭಗೊಂಡಿದೆ. ಪಂಚಾಯ್ತಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣಗೊಂಡ 5 ಬಹುಮಹಡಿ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಆದೇಶ ನೀಡಿದ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಸೋಮವಾರ ಬೆಳಗಿನ ಜಾವದಿಂದ ನಡೆಯಿತು.

ಕುಶಾಲನಗರ ಪಟ್ಟಣದ ಹೆದ್ದಾರಿಯಲ್ಲಿ 2 ಕಟ್ಟಡಗಳು, ಬೈಪಾಸ್ ರಸ್ತೆಯಲ್ಲಿ 2 ಕಟ್ಟಡಗಳು ಹಾಗೂ ಬಡಾವಣೆಯೊಂದರ ಬಳಿ ನಿರ್ಮಾಣಗೊಂಡಿರುವ ಬಹುಮಹಡಿ ಕಟ್ಟಡ ಸೇರಿದಂತೆ ಒಟ್ಟು 5 ಕಟ್ಟಡಗಳ ತೆರವು ಕಾರ್ಯ ದಿನವಿಡೀ ನಡೆಯಿತು.

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಳಿ ವ್ಯಕ್ತಿಯೊಬ್ಬರು ರಸ್ತೆ ಹಾಗೂ ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದು ಹಲವು ಬಾರಿ ಪಂಚಾಯಿತಿಯಿಂದ ನೋಟಿಸ್ ನೀಡಿದರೂ ಸ್ಪಂದಿಸದೆ ಕಟ್ಟಡ ನಿರ್ಮಾಣಗೊಂಡಿತ್ತು. ಮೈಸೂರು ರಸ್ತೆಯ ವೆಂಕಟೇಶ್ವರ ಥಿಯೇಟರ್ ಎದುರು ಭಾಗದಲ್ಲಿ ಸಣ್ಣ ನಿವೇಶನವೊಂದರಲ್ಲಿ 4 ಮಹಡಿಗಳ ಕಟ್ಟಡ ನಿರ್ಮಾಣ, ಬೈಪಾಸ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ಆಸ್ಪದ ಕಲ್ಪಿಸದೆ ಚರಂಡಿ ಮೇಲೆ ಕಟ್ಟಡ ನಿರ್ಮಾಣ ಹಾಗೂ ಗೌಡ ಸಮಾಜ ರಸ್ತೆಯಲ್ಲಿ ಪಂಚಾಯಿತಿ ನಿಯಮ ಮೀರಿ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಈ ಬಗ್ಗೆ ವರದಿ ನೀಡಲಾಗಿತ್ತು.

ಪರಿಶೀಲನೆ ನಡೆಸಿ ಈ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಖ್ಯಾಧಿಕಾರಿಗೆ ಆದೇಶ ನೀಡಿದ ನಂತರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದು ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ಮೇರೆಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಆರೋಗ್ಯಾಧಿಕಾರಿ ಲಿಂಗರಾಜು, ಪಂಚಾಯ್ತಿ ಇಂಜಿನಿಯರ್ ವೈ.ಎಂ. ಶ್ರೀದೇವಿ ನೇತೃತ್ವದಲ್ಲಿ ಪೌರಕಾರ್ಮಿಕರ ತಂಡ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ಕೈಗೊಂಡಿತ್ತು.

ಕಾರ್ಯಾಚರಣೆ ಸಂದರ್ಭ ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಒತ್ತಡ ಹಾಕಿದ್ದು ಕಂಡುಬಂತು. ಕೆಲವೆಡೆ ಕಟ್ಟಡ ಮಾಲೀಕರು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಲಂಚ ನೀಡಿರುವದಾಗಿ ಆರೋಪ ವ್ಯಕ್ತಪಡಿಸಿದ್ದು, ಕೇಳಿಬಂತು. ಇದ್ಯಾವದಕ್ಕೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳಲಿಲ್ಲ.

5 ಕಟ್ಟಡಗಳ ಮಾಲೀಕರು ಸ್ವತಃ ತಾವೇ ಕಟ್ಟಡವನ್ನು ತೆರವುಗೊಳಿಸುವದಾಗಿ ಲಿಖಿತ ಮುಚ್ಚಳಿಕೆ ಬರೆದುಕೊಟ್ಟ ಕಾಲಾವಕಾಶ ಕೋರಿದ ಹಿನ್ನಲೆಯಲ್ಲಿ ತೆರವು ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದ್ದಾರೆ. ಪಟ್ಟಣದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿರುವ ಇನ್ನಷ್ಟು ಕಟ್ಟಡಗಳ ತೆರವಿಗೆ ಕ್ರಮಕೈಗೊಳ್ಳುವದಾಗಿ ಕಿರಿಯ ಅಭಿಯಂತರರಾದ ವೈ.ಎಂ. ಶ್ರೀದೇವಿ ಮಾಹಿತಿ ನೀಡಿದ್ದಾರೆ.

ಕುಶಾಲನಗರದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣವಾದ ಬಹುಮಹಡಿ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾಗಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕ್ರಮವನ್ನು ಕುಶಾಲನಗರ ಹಿತರಕ್ಷಣಾ ಹೋರಾಟ ಸಮಿತಿ ಬೆಂಬಲಿಸಿದೆ. ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸಮಿತಿಯ ಸಂಚಾಲಕ ಕೆ.ಜಿ. ಮನು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಪಟ್ಟಣದ ಹಿತದೃಷ್ಟಿಯಿಂದ ಅಧಿಕಾರಿಗಳು ಕೈಗೆತ್ತಿಕೊಂಡಿರುವ ಕ್ರಮ ಶ್ಲಾಘನಾರ್ಹವಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುವಂತಾಗಬೇಕು. ಈ ಸಂದರ್ಭ ಯಾವದೇ ಜನಪ್ರತಿನಿಧಿಗಳು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಬಾರದು. ಅಕ್ರಮವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಿಂದ ಪಟ್ಟಣದ ಸಂಚಾರ ವ್ಯವಸ್ಥೆ ಏರುಪೇರಾಗುತ್ತಿದ್ದು ಈ ನಿಟ್ಟಿನಲ್ಲಿ ನಾಗರಿಕರು ಸಹಕರಿಸಬೇಕಾಗಿದೆ ಎಂದು ಸಭೆ ನಿರ್ಣಯ ಕೈಗೊಂಡಿದೆ.

ಈ ನಡುವೆ ಕುಶಾಲನಗರ ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ಉದ್ಯಾನವನಗಳು, ರಸ್ತೆಗಳು ಹಾಗೂ ಸಾರ್ವಜನಿಕ ಮೀಸಲಿರಿಸಲಾದ ಜಾಗಗಳ ಒತ್ತುವರಿ ಬಗ್ಗೆ ಪರಿಶೀಲನೆಗಾಗಿ ಜಿಲ್ಲಾಮಟ್ಟದ ವಿಶೇಷ ಟಾಸ್ಕ್ ಫೋರ್ಸ್ ರಚನೆಗೆ ಜಿಲ್ಲಾಧಿಕಾರಿಗಳಿಗೆ ಮನವಿ. ಕುಶಾಲನಗರ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಗಾಂಜ ಮಾರಾಟ ಇದರಿಂದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವದು ಇಂತಹ ದಂಧೆಗಳ ಬಗ್ಗೆ ಕುಶಾಲನಗರ ಡಿವೈಎಸ್ಪಿ ಗಮನಕ್ಕೆ ತಂದು ಕಠಿಣ ಕ್ರಮಕೈಗೊಳ್ಳಲು ಒತ್ತಾಯಿಸಲಾಗುವದು. ಕುಶಾಲನಗರ ಪಟ್ಟಣ ವ್ಯಾಪ್ತಿಯ ಹೋಟೆಲ್‍ಗಳಲ್ಲಿ ಗ್ರಾಹಕರಿಂದ ಹೆಚ್ಚುವರಿ ದರ ಪಡೆಯುವದು ಕಂಡುಬಂದಿದ್ದು ಈ ನಿಟ್ಟಿನಲ್ಲಿ ಪ್ರತೀ ಹೋಟೆಲ್‍ನಲ್ಲಿ ದರ ಪಟ್ಟಿಗಳನ್ನು ಅಳವಡಿಸಲು ಒತ್ತಾಯ, ಈ ಬಗ್ಗೆ ಚರ್ಚೆ ನಡೆದು ಮನವಿ ಪತ್ರವನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ನೀಡುವಂತೆ ಸಭೆಯಲ್ಲಿ ನಿರ್ಧರಿಸಿದೆ.

ಈ ಸಂದರ್ಭ ಸಮಿತಿಯ ಗೌರವಾಧ್ಯಕ್ಷ ನಂಜುಂಡಸ್ವಾಮಿ, ವಿವಿಧ ಸಂಘಸಂಸ್ಥೆಗಳ ಪ್ರಮುಖರಾದ ಎಂ.ಎನ್.ಚಂದ್ರಮೋಹನ್, ಎಂ.ಡಿ.ಕೃಷ್ಣಪ್ಪ, ಎಂ.ಕೃಷ್ಣ, ನಿಡ್ಯಮಲೆ ದಿನೇಶ್, ಕೆ.ಎಸ್.ನಾಗೇಶ್, ಅರುಣ್‍ಕುಮಾರ್, ವೈಶಾಖ್, ಮಂಜುನಾಥ್, ಅಮೃತ್, ರಾಜೇಶ್, ಭಾಸ್ಕರ್ ನಾಯಕ್ ಮತ್ತಿತರರು ಇದ್ದರು.