ಮಡಿಕೇರಿ, ಏ. 24: ಪಾಲೆಮಾಡುವಿನಲ್ಲಿ ರಸ್ತೆಯೊಂದಕ್ಕೆ ಇಡಲಾಗಿದ್ದ ಟಿಪ್ಪು ಸುಲ್ತಾನ್ ಹೆಸರಿನ ನಾಮಫಲಕ ತೆರವು ಸಂದರ್ಭ ನಡೆದ ಲಘು ಲಾಠಿ ಪ್ರಹಾರ, ಬಿಗುವಾತಾವರಣ ಉಂಟಾದ ಬಗ್ಗೆ ಸರಕಾರ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕೆಂದು ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಪಾಲೆಮಾಡುವಿನಲ್ಲಿ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ತಾನು ಮಾಹಿತಿ ಪಡೆದಿದ್ದು, ಸಂಘಪರಿವಾರದ ಕೆಲವರ ಕುತಂತ್ರದಿಂದ ಪೊಲೀಸರು ಏಕಾಏಕಿ ತೆರಳಿ ನಾಮಫಲಕಗಳನ್ನು ತೆರವುಮಾಡಿದ್ದಾರೆ. ಈ ವೇಳೆ ಗಾಂಧಿಜಯಂತಿ ವೇಳೆ ಹಾಕಲಾಗಿದ್ದ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಕೂಡ ತೆಗೆಸಲಾಗಿದ್ದು, ಇದಕ್ಕೆ ಅಂಬೇಡ್ಕರ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ. ಈ ಸಂದರ್ಭ ಪೊಲೀಸರು ಲಾಠಿ ಬೀಸಿದ್ದಾರೆ. ಇದು ಪೊಲೀಸರ ದೌರ್ಜನ್ಯವಾಗಿದ್ದು, ಖಂಡನಾರ್ಹ. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸುಬ್ಬಯ್ಯ ಒತ್ತಾಯಿಸಿದರು.

ಕೊಡಗಿನ ಕಾಂಗ್ರೆಸ್ ನಾಯಕರು, ಕೊಡಗಿನ ಉಸ್ತುವಾರಿ ಮಂತ್ರಿಗಳು ಕೊಡಗಿನ ಬಡವರ ನೋವಿಗೆ ಸ್ಪಂದಿಸುತ್ತಿಲ್ಲ. ಹಾಲಿ ಇರುವ ಉಸ್ತುವಾರಿ ಸಚಿವರು ಕೊಡಗಿಗೆ ಶಾಪವಾಗಿದ್ದು, ಅವರು ಬಂದನಂತರ ಒಂದೊಂದೆ ತೊಂದರೆಗಳು ಕೊಡಗಿಗೆ ಎದುರಾಗುತ್ತಿದೆ ಎಂದು ಎಕೆಎಸ್ ಆರೋಪಿಸಿದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ಪಾಲೆಮಾಡುವಿನಲ್ಲಿ ರಸ್ತೆಗೆ ಟಿಪ್ಪು ಹೆಸರಿಟ್ಟಿರುವದು ಕೊಡಗಿನ ಜನತೆಯ ಭಾವನೆಗಳಿಗೆ ವಿರುದ್ಧ ಎಂದು ನೀಡಿರುವ ಹೇಳಿಕೆ ಪ್ರತಿಕ್ರಿಯಿಸಿದ ಸುಬ್ಬಯ್ಯ, ಮಾತಂಡ ಮೊಣ್ಣಪ್ಪ ಅವರಿಗೆ ಟಿಪ್ಪು ಸುಲ್ತಾನ್ ಬೇಡವಾಗಿರಬಹುದು. ಟಿಪ್ಪುವನ್ನು ನಾವು ಗೌರವಿಸುತ್ತೇವೆ. ಆತನೊಬ್ಬ ಸ್ವಾತಂತ್ರ್ಯ ಹೋರಾಟಗಾರ, ಮಾನವತಾವಾದಿ ಎಂದರು. ಟಿಪ್ಪುವನ್ನು ವಿರೋಧಿಸುವರು ಟಿಪ್ಪುವನ್ನು ಪೂಜಿಸುವವರ ಭಾವನೆಗಳಿಗೂ ಧಕ್ಕೆ ತರುವ ಕೆಲಸ ಮಾಡುವದು ಸರಿಯಲ್ಲ ಎಂದರು.

ಪಾಲೆಮಾಡುವಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುತ್ತಿರುವದರಿಂದ ಅಲ್ಲಿನ ಪರಿಸರಕ್ಕೆ ಧಕ್ಕೆ ಉಂಟಾಗಲಿದೆ. ಈ ಬಗ್ಗೆ ದಾಖಲೆಗಳನ್ನು ಕಲೆ ಹಾಕುತ್ತಿದ್ದು, ಹಸಿರು ಪೀಠಕ್ಕೆ ದೂರು ನೀಡಲಾಗುವದು ಎಂದು ತಿಳಿಸಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಪ್ರೇಮ್‍ಕುಮಾರ್ ಮಾತನಾಡಿ, ಪಾಲೆಮಾಡುವಿನಲ್ಲಿ ಎಲ್ಲರೂ ಜಾತ್ಯತೀತ ನಿಲುವಿನೊಂದಿಗೆ ಬದುಕುತ್ತಿದ್ದು, ಅಲ್ಲಿರುವ ರಸ್ತೆಗಳಿಗೆ ಹೋರಾಟಗಾರರ ಹೆಸರನ್ನಿಡಲಾಗಿದೆ. ಆದರೆ ಇದಕ್ಕೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಅಲ್ಲಿನ ಪಿಡಿಓ ಅವರು ಅಜ್ಞಾನಿಯಂತೆ ವರ್ತಿಸಿದ್ದು, ಅವರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು. ಉಸ್ತುವಾರಿ ಸಚಿವರು ವಿನಾಕಾರಣ ಹೇಳಿಕೆಗಳನ್ನು ನೀಡದೆ ಸ್ಥಳಕ್ಕೆ ಬಂದು ಪರಿಶೀಲಿಸಿ ಬಳಿಕ ಹೇಳಿಕೆಗಳನ್ನು ನೀಡಲಿ ಎಂದರು.

ಹೊದ್ದೂರು ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾವತಿ ಮಾತನಾಡಿ, ಪಂಚಾಯಿತಿ ಪಿಡಿಓ ಅವರು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತಿಲ್ಲ ಎಂದು ದೂರಿದರಲ್ಲದೆ ತೆರವು ಮಾಡಲಾದ ನಾಮಫಲಕಗಳನ್ನು ಮರು ಅಳವಡಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ವಕೀಲ ವಿದ್ಯಾಧರ್ ಮಾತನಾಡಿ, ನಾಮಫಲಕ ಅಳವಡಿಕೆ ಅನುಮತಿ ರಹಿತವಾಗಿದೆ ಎಂದು ಕ್ರಮಕೈಗೊಳ್ಳುವದೆ ಆದರೆ ಕೊಡಗಿನಾದ್ಯಂತ ವಿವಿಧ ಸಂಘ ಸಂಸ್ಥೆ, ಧರ್ಮಗಳ ಧ್ವಜಸ್ತಂಭ ಪೀಟವಿದೆ. ಅದನ್ನು ಕೂಡ ಜಿಲ್ಲಾಡಳಿತ ತೆರವುಮಾಡಲಿ ಎಂದು ಹೇಳಿದರು. ಕೊಡಗಿನಲ್ಲಿ ನಕ್ಸಲ್ ಚಟುವಟಿಕೆ ಇದೆ ಎನ್ನುವದಾದರೆ ಜಿಲ್ಲಾಡಳಿತ ಅದನ್ನು ದಾಖಲೆ ಸಹಿತ ತೋರಿಸಲಿ ಎಂದು ಆಗ್ರಹಿಸಿದರು.

ಬಹುಜನ ಕಾರ್ಮಿಕ ಸಂಘದ ಕಾರ್ಯದರ್ಶಿ ಮೊಣ್ಣಪ್ಪ ಮಾತನಾಡಿ, ಪೊಲೀಸ್ ಹಾಗೂ ಪಂಚಾಯಿತಿ ಆಡಳಿತದ ಕ್ರಮವನ್ನು ಖಂಡಿಸಿದರು.

ಗೋಷ್ಠಿಯಲ್ಲಿ ಸ್ಥಳೀಯ ನಿವಾಸಿ ರಾಧ ಉಪಸ್ಥಿತರಿದ್ದರು.