ಸಿದ್ದಾಪುರ, ಏ. 23: ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷರು ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಕಾಮಗಾರಿ ಕೈಗೊಳ್ಳುತ್ತಿದ್ದಾರೆ ಎಂದು ಸಿ.ಪಿ.ಐ.ಎಂ ಮುಖಂಡ ಎನ್.ಡಿ ಕುಟ್ಟಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಹಲವಾರು ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ಗ್ರಾ.ಪಂ ಆಡಳಿತ ಮಂಡಳಿ ಇದೀಗ ತನ್ನ ಜವಾಬ್ದಾರಿ ಯನ್ನು ಮರೆತ್ತಿದ್ದು, ದುಬಾರೆ, ಅವರೆಗುಂದ ಮುಂತಾದ ಕಡೆಗಳಲ್ಲಿ ಕೈಗೊಂಡ ಕಾಮಗಾರಿಗಳನ್ನು ಅಧ್ಯಕ್ಷ ಮಣಿ ಬೇನಾಮಿ ಹೆಸರಿನಲ್ಲಿ ನಡೆಸಿದ್ದು, ಮಾರುಕಟ್ಟೆಯಲ್ಲಿನ ನೂತನ ಮಳಿಗೆಯ ಕಾಮಗಾರಿಯಲ್ಲಿಯೂ ಅವ್ಯವಹಾರ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಸಿದ್ದಾಪುರ ಪಟ್ಟಣದಲ್ಲಿ ಶುಚಿತ್ವವನ್ನು ಕಾಪಾಡಬೇಕಾದ ಗ್ರಾ.ಪಂ, ಪಟ್ಟಣದ ಎಲ್ಲ್ಲೆಂದರಲ್ಲಿ ಕಸದ ರಾಶಿಯನ್ನು ಸುರಿದು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದೆ. ಶಾಲೆಗಳು, ಆಸ್ಪತ್ರೆ ಸೇರಿದಂತೆ ಅಂಗಡಿ ಮಳಿಗೆಗಳ ಮುಂಭಾಗದಲ್ಲಿ ಕಸದ ರಾಶಿ ಬೆಟ್ಟದ ರೀತಿಯಲ್ಲಿದ್ದು, ವಿರೋಧ ಪಕ್ಷವಾದ ಎಸ್.ಡಿ.ಪಿ.ಐ. ಸದಸ್ಯರು ಚಕಾರವೆತ್ತದೆ ಭ್ರಷ್ಟಾಚಾರಕ್ಕೆ ಕೈಜೋಡಿಸುತ್ತಿದ್ದಾರೆ ಎಂದು ದೂರಿದರು.

ಪಕ್ಷದ ಗ್ರಾಮ ಸಮಿತಿ ಕಾರ್ಯದರ್ಶಿ ಬೈಜು ಮಾತನಾಡಿ, ಕಸ ವಿಲೇವಾರಿ ಮಾಡಬೇಕಾದ ಗ್ರಾ.ಪಂ. ತನ್ನ ಜವಬ್ದಾರಿಯನ್ನು ಮರೆತಿದೆ ಎಂದು ಟೀಕಿಸಿದರು. ತಾ.ಪಂ ಸದಸ್ಯ ಕೆ.ಎಂ ಜನೀಶ್, ತಮ್ಮ ಅಂಗಡಿಯ ಎದುರಿನಲ್ಲಿ ರಾಶಿಗಟ್ಟಲೆ ಕಸವಿದ್ದರೂ, ಮೌನ ವಹಿಸಿದ್ದು, ಬಿಜೆಪಿ ಪ್ರಮುಖರು ಗ್ರಾ.ಪಂ. ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಪಕ್ಷದ ಪ್ರಮುಖ ಮಂಜು ಹಾಜರಿದ್ದರು.