ವೀರಾಜಪೇಟೆ, ಏ.23: ಅಮ್ಮತ್ತಿ ಕಾರ್ಮಾಡು ಗ್ರಾಮದ ಕಾವಾಡಿಯಲ್ಲಿ ಅಮ್ಮತ್ತಿ ರ್ಯಾಲಿ ಕ್ರಾಸ್ 2017 ಕಾರ್ಮಾಡು ಡರ್ಟ್ ರ್ಯಾಲಿಯನ್ನು ಗೋಣಿಕೊಪ್ಪ ಆರ್.ಎಂ.ಸಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಉದ್ಘಾಟಿಸಿದರು.

ಈ ಸಂದರ್ಭ ರ್ಯಾಲಿಯ ಕುರಿತು ಮಾತನಾಡಿದ, ಸ್ಥಳೀಯ ಆಯೋಜಕ ಉದ್ದಪಂಡ ತಿಮ್ಮಣ್ಣ, ರ್ಯಾಲಿ ಹಾಗೂ ಆಟೋ ಕ್ರಾಸ್ ನಡುವೆ ಅನೇಕ ರೀತಿಯ ವ್ಯತ್ಯಾಸಗಳಿರುತ್ತದೆ. ಆಟೋಕ್ರಾಸ್‍ನಲ್ಲಿ ಒಂದು ಕಿ ಮೀ ಅಂತರವಿದ್ದರೆ ರ್ಯಾಲಿಯಲ್ಲಿ ಮೂರು ಕಿ ಮೀ ಅಂತರವಿರುತ್ತದೆ. ಇಂದು ಇಲ್ಲಿ ಕಾರು, ಜೀಪು, ಜಿಪ್ಸಿ ಸೇರಿದಂತೆ 10 ಬಗೆಯ ವಾಹನಗಳು ಭಾಗವಹಿಸುತ್ತಿವೆ. ಸ್ಥಳೀಯ ಯುವ ಜನತೆಗೆ ಬೆಂಬಲ ನೀಡುವ ಉದ್ದೇಶ ಇದಾಗಿದೆ ಎಂದರು.

ರಾಷ್ಟ್ರೀಯ ರ್ಯಾಲಿ ಪಟು ಮಾಲೇಟಿರ ಜಗತ್ ನಂಜಪ್ಪ ಮಾತನಾಡಿ, ನಾವು ವಿ ಪ್ರೇಂಡ್ಸ್ ಪವಿವ್‍ಅಫ್ ರೋಡರ್ಸ್ ಕ್ಲಬ್ ಮೂಲಕ ಯುವ ರ್ಯಾಲಿ ಪಟುಗಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ಕಾವಾಡಿಯ ಈ ಗದ್ದೆಯು ರ್ಯಾಲಿ ಕ್ರಾಸ್ ಗೆ ಉತ್ತಮ ಸ್ಥಳವಾಗಿ ಕಂಡು ಬಂದ ಹಿನ್ನಲೆಯಲ್ಲಿ, ರಾಷ್ಟ್ರಮಟ್ಟದ ರ್ಯಾಲಿಯ ಟ್ರ್ಯಾಕ್‍ನಂತೆ ರಸ್ತೆ ನಿರ್ಮಾಣ ಮಾಡಿ ರ್ಯಾಲಿ ಆಯೋಜಿಸಿದ್ದೇವೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಮಾತನಾಡಿ ಕ್ರೀಡಾ ತವರು ಕೊಡಗಿನಲ್ಲಿ ರೋಚಕ, ಸಾಹಸಮಯವಾದ ಈ ರ್ಯಾಲಿಯಲ್ಲಿ ಸುರಕ್ಷತೆಯ ಚಾಲನೆ, ಉತ್ತಮ ಅನುಭವಗಳನ್ನು ಗಳಿಸಿಕೊಂಡು ರಾಷ್ಟ್ರೀಯ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿ ಜಿಲ್ಲೆಯ ಹಿರಿಮೆಯನ್ನು ಎತ್ತಿ ಹಿಡಿಯುವಂತೆ ಕರೆ ನೀಡಿದರು.

ಮುಖ್ಯ ಆಯೋಜಕರಾದ ಬೆಂಗಳೂರು ಏರ್ ಫಿಲ್ಟರ್ ಸಂಸ್ಥೆಯ ಕಾಡ್ಯಮಾಡ ಕುಶಾಲಪ್ಪ, ಮತ್ತೋರ್ವ ಆಯೋಜಕರು ಹಾಗೂ ಸ್ಥಳೀಯರಾದ ಉದ್ದಪಂಡ ಚೇತನ್ ಮತ್ತಿತರರು ಉಪಸ್ಥಿತರಿದ್ದರು. ರ್ಯಾಲಿಯಲ್ಲಿ ವಿವಿಧ ರಾಜ್ಯಗಳ ಅಂತರ್ರಾಷ್ಟ್ರೀಯ ರ್ಯಾಲಿ ಪಟುಗಳು ಹಾಗೂ 50 ವಾಹನಗಳು ಭಾಗವಹಿಸಿದ್ದವು.

ಮಳೆಯೊಂದಿಗೆ ಮುಕ್ತಾಯ

ಅಮ್ಮತ್ತಿಯಲ್ಲಿ ಸಂಜೆ ಬಂದ ಮಳೆ ರ್ಯಾಲಿಗೆ ಮತ್ತಷ್ಟು ರೋಚಕತೆ ನೀಡಿತು, ಧೂಳಿನಲ್ಲಿ ಸಾಗಿದ ರ್ಯಾಲಿ ಕೆಸರಿನಲ್ಲಿ ರೋಚಕತೆಯನ್ನು ತಂದು ಕೊಟ್ಟಿತು. ಇದರಿಂದಾಗಿ ಸಂಜೆ ವೇಳೆಗೆ ನೋಂದಾಯಿತ 95 ವಾಹನಗಳ ಪೈಕಿ 17 ವಾಹನ ರ್ಯಾಲಿಯಲ್ಲಿ ಭಾಗವಹಿಸಲು ಸಾದ್ಯವಾಗದೆ ಹೋಯಿತು ಮಳೆಯಿಂದ ಕೆಲವು ಕಾಲ ರ್ಯಾಲಿ ನಿಂತರು,. ಜಿಪ್ಸಿ ಹಾಗೂ ಜೀಪುಗಳು ಸಂಜೆ 6.30 ರವರಗೆ ಭಾಗವಹಿಸಿ ಕೆಸರಿನಲ್ಲಿ ಓಡುತ, ಕೆಸರಿನಲ್ಲಿ ಸಿಕ್ಕಿ ಹಾಕಿ ಕೊಂಡರು ವಾಹನ ಚಾಲಕರ ಸಾಹಸದಿಂದ ಕೆಸರನ್ನು ಚಿಮ್ಮಿಸುತ ಗುರಿಯತ್ತ ಸಾಗಿದವು. ಇದೇ ಸಂದರ್ಭ ಕೆಲವು ವಾಹನ ಕೈ ಕೊಟ್ಟರೆ, ರಿತೇಶ್ ಗುತ್ತೇದಾರ್ ಎಂಬವರ ವಾಹನ ಮಗುಚಿ ಬಿದ್ದತು. ಯಾರಿಗೂ ಅಪಾಯ ಸಂಭವಿಸಲಿಲ್ಲ.

ವಿಜೇತರು

ಈ ರ್ಯಾಲಿಯಲ್ಲಿ ಅಂತಿಮವಾಗಿ, 1400 ಸಿ.ಸಿ ವಿಭಾಗದಲ್ಲಿ ಮೋಹಿನ್ ಪಾಷ ಪ್ರಥಮ , ಮಹ್ಮದ್ ಶಾಹಿಲ್ ದ್ವಿತೀಯ ಮತ್ತು ಹರ್ಷ ನಟರಾಜ ತೃತೀಯ ಬಹುಮಾನಗಳಿಸಿದರು. 1600 ಸಿ.ಸಿ ವಿಭಾಗದಲ್ಲಿ- ಧ್ರುವಚಂದ್ರಶೇಖರ್ ಪ್ರಥಮ, ವಿಕ್ರಂಗೌಡ ದ್ವಿತೀಯ ಮತ್ತು ವಿಶಾಲ್ ರಾಜ್ ತೃತೀಯ ಸ್ಥಾನ ಗಳಿಸಿದರು. ಕೂರ್ಗ್‍ಒಪನ್ ವಿಭಾಗದಲ್ಲಿ, ಸಮೃದ್ ನಂಜಪ್ಪ ಪ್ರಥಮ, ರಾಜಶೇಖರ ಗೌಡ ದ್ವಿತೀಯ, ನಿಶ್ಚಲ್ ಅಯ್ಯಪ್ಪ ತೃತೀಯ ಸ್ಥಾನ ಗಳಿಸಿದರು. ನಿರ್ಬಂಧ ರಹಿತ ವಿಭಾಗದಲ್ಲಿ, ರಿತೇಶ್ .ಎಂ.ಗುತ್ತೆದಾರ್ ಬಹುಮಾನಗಳಿಸಿದರು. ರೋಲ್ ಕೇಜ್ ವಿಭಾಗದಲ್ಲಿ, ವಿಕ್ರಂ ಗೌಡ ಪ್ರಥಮ ಹಾಗೂ ಅವಿನಾಶ್ ದ್ವಿತೀಯ ಸ್ಥಾನ ಗಳಿಸಿದರು. ಜಿಪ್ಸಿ ಒಪನ್ ಕ್ಲಾಸ್‍ನಲ್ಲಿ, ಗಗನ್ ಕರಂಬಯ್ಯ ಪ್ರಥಮ, ಅವಿನ್ ನಂಜಪ್ಪ ದ್ವಿತೀಯ ಸ್ಥಾನ ಹಾಗೂ ಅಮೃತ್ ನಂಜಪ್ಪ ತೃತೀಯ ಗಳಿಸಿದರು. 800 ಸಿ.ಸಿಯಲ್ಲಿ , ನಿಖಿಲ್ ಚಂಗಪ್ಪ ಪ್ರಥಮ ಹಾಗೂ ವಾಷಿಮ್ ಪಾಷ ದ್ವಿತೀಯ ಸ್ಥಾನ ಗಳಿಸಿದರು.

ರ್ಯಾಲಿಯ ಪ್ರಯೋಜಕತ್ವ ವಹಿಸಿದ್ದ ಉದ್ಯಮಿಗಳಾದ ಮಾರಿಚ್ ಮಿಷಲಿನ್ ಮತ್ತು ಕವಾತ್ ವಿಜೇತರಿಗೆ ಬಹುಮಾನ ವಿತರಿಸಿದರು.