ಮಡಿಕೇರಿ, ಏ. 24: ಕೊಡಗಿನ ದಿಡ್ಡಳ್ಳಿ, ಪಾಲೆಮಾಡು, ಚೆರಿಯ ಪರಂಬುವಿನಲ್ಲಿ ನಿರ್ವಸತಿಗರ ಹೆಸರಿನಲ್ಲಿ ಶಾಂತಿ ಕದಡುವ ಮೂಲಕ ಗಲಭೆ ಹುಟ್ಟು ಹಾಕಲು ಯತ್ನಿಸುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಬಿ. ಭಾರತೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ ಅವರುಗಳು ಜಂಟಿ ಹೇಳಿಕೆ ನೀಡಿ, ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಜನವಲಯದಲ್ಲಿ ಭಯದ ವಾತಾವರಣ ಸೃಷ್ಟಿಸುವ ವಿಚ್ಛಿದ್ರಕಾರಿ ಶಕ್ತಿಗಳಿಗೆ ಜಿಲ್ಲಾಡಳಿತ ಕೊಡಗಿನಲ್ಲಿ ನೆಲೆ ಕಲ್ಪಿಸಬಾರದೆಂದು ಆಗ್ರಹಿಸಿದ್ದಾರೆ.

ಕೊಡಗಿನ ದಿಡ್ಡಳ್ಳಿ, ಪಾಲೆಮಾಡು, ಚೆರಿಯಪರಂಬುವಿನಲ್ಲಿ ಸರಕಾರಿ ಭೂಮಿಯಲ್ಲಿ ಕೆಲವು ಅಕ್ರಮವಾಗಿ ನೆಲೆಸಿರುವ ಮಂದಿ, ಆದಿವಾಸಿಗಳ ನೆಪದಲ್ಲಿ ಜಿಲ್ಲೆಯ ಸಾಮರಸ್ಯ ಕದಡುವ ಕೃತ್ಯಕ್ಕೆ ಮುಂದಾದರೆ, ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಹಾಗೂ ಪೊಲೀಸ್ ಇಲಾಖೆ ಕಾನೂನಾತ್ಮಕವಾಗಿ ಕೈಗೊಳ್ಳುವ ತೀರ್ಮಾನಗಳಿಗೆ ಪಕ್ಷದಿಂದ ನೈತಿಕ ಬೆಂಬಲ ನೀಡಲಾಗುವದು ಎಂದು ಉಭಯ ಪ್ರಮುಖರು ಘೋಷಿಸಿದ್ದಾರೆ.

ಎಂ.ಬಿ. ದೇವಯ್ಯ ಆಕ್ರೋಶ

ಕೊಡಗಿನಲ್ಲಿ ಇತ್ತೀಚೆಗೆ ಕೆಲವರು ಆದಿವಾಸಿಗಳ ನೆಪದಲ್ಲಿ ಸಮಾಜಘಾತುಕ ಚಟುವಟಿಕೆ ನಡೆಸುತ್ತಿದ್ದು, ಇಂತಹವರಿಗೆ ಬೇರು ಬಿಡಲು ಅವಕಾಶವಾಗದಂತೆ ಜಿಲ್ಲೆಯಿಂದ ಮೂಲೋತ್ಪಾಟನೆ ಮಾಡುವಂತೆ ಆಗ್ರಹಿಸಿರುವ ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ, ಈ ದಿಸೆಯಲ್ಲಿ ಕೊನೆಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿರುವದು ಸ್ವಾಗತಾರ್ಹವೆಂದು ಪ್ರತಿಕ್ರಿಯಿಸಿದ್ದಾರೆ.

ಪಾಲೆಮಾಡು, ದಿಡ್ಡಳ್ಳಿ ಹಾಗೂ ಚೆರಿಯಪರಂಬುವಿನಲ್ಲಿ ಸರಕಾರಿ ಜಾಗವನ್ನು ಆಕ್ರಮಿಸಿಕೊಂಡಿರುವ ಹೊರಗಿನ ಕೆಲವು ಶಕ್ತಿಗಳು ಕೊಡಗಿನ ಸಾರ್ವಭೌಮತ್ವಕ್ಕೆ ಧಕ್ಕೆ ತಂದೊಡ್ಡುತ್ತಿರುವದಾಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಅಂಥ ಶಕ್ತಿಗಳನ್ನು ನಿಯಂತ್ರಿಸಲು ಕೊಡಗಿನಲ್ಲಿ ಪಕ್ಷಾತೀತ ಹೋರಾಟ ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.

ಕೋಡಿ ಪೊನ್ನಪ್ಪ ಒತ್ತಾಯ

ಕೊಡಗು ರಾಷ್ಟ್ರೀಯ ಕಾಫಿ ಪಾನೀಯ ಹೋರಾಟ ಸಮಿತಿ ಸಂಚಾಲಕ ಕೋಡಿ ಪೊನ್ನಪ್ಪ ಹೇಳಿಕೆ ನೀಡಿ, ಕರಿಕೆಯಂತಹ ಗಡಿಭಾಗಗಳಲ್ಲಿ ಇಂದು ಕಾರ್ಮಿಕರ ಸೋಗಿನಲ್ಲಿ ಹೊರರಾಜ್ಯದವರಿಗೆ ನೆಲೆಕಲ್ಪಿಸುವ ಯತ್ನದೊಂದಿಗೆ, ಪಾಲೆಮಾಡು, ದಿಡ್ಡಳ್ಳಿ, ಚೆರಿಯಪರಂಬುವಿನಂತಹ ಕಡೆ ಅಕ್ರಮ ಕೂಟ ಕಟ್ಟಿಕೊಂಡು ಕೆಲವರು ಭಯದ ವಾತಾವರಣ ಸೃಷ್ಟಿಸುವದು ತೀವ್ರ ಖಂಡನೀಯ ಎಂದು ಟೀಕಿಸಿದ್ದಾರೆ. ಈ ದಿಸೆಯಲ್ಲಿ ಜಿಲ್ಲಾ ಆಡಳಿತ ಎಚ್ಚೆತ್ತುಕೊಂಡು ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗುವವರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವಂತೆ ಅವರು ಒತ್ತಾಯಿಸಿದ್ದಾರೆ.