ಗೋಣಿಕೊಪ್ಪಲು, ಏ. 24: ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಹಾಗೂ ಅಳಮೇಂಗಡ ಕುಟುಂಬ ಸಹಯೋಗದಲ್ಲಿ 18 ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆ ಅಳಮೇಂಗಡ ಕ್ರಿಕೆಟ್ ಕಪ್‍ಗೆ ಚಾಲನೆ ನೀಡಲಾಯಿತು. ವಿವಿಧ ಕಾರ್ಯಕ್ರಮಗಳ ಮೂಲಕ ಕ್ರೀಡಾಭಿಮಾನಿಗಳು ಸಂಭ್ರಮಿಸಿದರು.ಪೂಜೆ, ಮೆರವಣಿಗೆ : ಅಳಮೇಂಗಡ ಕುಟುಂಬದವರು ಗಣಪತಿ ಗುಡಿಯಲ್ಲಿ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಹಸಿರು ಸೀರೆ ಉಟ್ಟು ಕಂಗೊಳಿಸಿದರು. ನಂತರ ಮೈದಾನದವರೆಗೆ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯಲ್ಲಿ ಆಗಮಿಸುವ ಮೂಲಕ ಸಾರ್ವಜನಿಕರಲ್ಲಿ ಸಂಭ್ರಮ ಮೂಡಿಸಿದರು. ಯುವತಿಯರು ಹಾಗೂ ಪುರುಷರು ಕುಪ್ಯಚೇಲೆ ತೊಟ್ಟು ಹೆಜ್ಜೆ ಹಾಕಿದರು.
ಉದ್ಘಾಟನೆ : ಸಭಾ ಕಾರ್ಯಕ್ರಮವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿ ಮಾತನಾಡಿ ಕೊಡವ ಕ್ರಿಕೆಟ್‍ಗೆ ಸರ್ಕಾರದಿಂದ ನೀಡುತ್ತಿದ್ದ ರೂ. 10 ಲಕ್ಷ ಅನುದಾನವನ್ನು ಈ ಬಾರಿ ರೂ. 5 ಲಕ್ಷಕ್ಕೆ ಇಳಿಸಲಾಗಿದೆ. ಹಿಂದಿನಂತೆ ರೂ. 10 ಲಕ್ಷ ಅನುದಾನ ನೀಡಲು ಸರ್ಕಾರವನ್ನು ಒತ್ತಾಯಿಸಲಾಗುವದು ಎಂದರು.
ಎಂಎಲ್‍ಸಿ ವೀಣಾ ಅಚ್ಚಯ್ಯ ಮಾತನಾಡಿ, ಸರ್ಕಾರ ಕ್ರೀಡೆಗಳಿಗೆ ಅನುದಾನ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ರೀಡಾಕೂಟಕ್ಕೆ ಇಂತಿಷ್ಟು ಎಂದು ನಿಗದಿ ಮಾಡುವದು ಉತ್ತಮ. ಈ ಬಗ್ಗೆ ಜನಪ್ರತಿನಿಧಿಗಳಾದ ನಮ್ಮಿಂದ ಸರ್ಕಾರಕ್ಕೆ ಮನವಿ ಮಾಡಲಾಗುವದು ಎಂದರು.
ಎಂಎಲ್ಸಿ, ಸುನಿಲ್ ಸುಬ್ರಮಣಿ ಮಾತನಾಡಿ, ಹಾಕಿ ಉತ್ಸವ ಆರಂಭಿಸಿದ ಪಾಂಡಂಡ ಕುಟ್ಟಣಿ ಹಾಗೂ ಕೊಡವ ಕ್ರಿಕೆಟ್ ಪರಿಚಯಿಸಿದ ಕಾರ್ಸನ್ ಕಾರ್ಯಪ್ಪ ಸಮಾಜಕ್ಕೆ ವಿಶೇಷ ಸಂದೇಶ ನೀಡಿದ್ದಾರೆ. ಎಲ್ಲಾ ವರ್ಗದವರು ಇಂದು ಕೊಡಗಿನಲ್ಲಿ ಕ್ರೀಡೆಯ ಮೂಲಕ ಒಂದಾಗುತ್ತಿದ್ದಾರೆ. ಇದು ನಮ್ಮ ಹೆಗ್ಗಳಿಕೆ. ಕಾಲೇಜು ಅಭಿವೃದ್ಧಿಗೆ ರೂ. 2 ಲಕ್ಷ ಅನುದಾನ ನೀಡುವದಾಗಿ ಘೋಷಿಸಿದರು.
ಕೊಡವ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್ ತಮ್ಮಯ್ಯ ಮಾತನಾಡಿ, ಬೇಸಿಗೆ ರಜೆಯಲ್ಲಿ ಕುಟುಂಬದೊಂದಿಗೆ ಪ್ರವಾಸ ತೆರಳುತ್ತಿದ್ದ ಯುವಕರು ಇಂದು ಕ್ರೀಡಾಕೂಟದ
(ಮೊದಲ ಪುಟದಿಂದ) ಮೂಲಕ ಜಿಲ್ಲೆಯಲ್ಲಿಯೆ ಉಳಿಯುವಂತಾಗಿದೆ. ಇದು ಕ್ರೀಡೆಗೆ ಪ್ರೋತ್ಸಾಹ ನೀಡಿದಂತಾಗಿದೆ. ಬಾಳೆಲೆಯಲ್ಲಿ ಸಾಂಸ್ಕøತಿಕ ಕಲಾವಿದರನ್ನು ಪ್ರೋತ್ಸಾಹಿಸಲು ಅಕಾಡೆಮಿ ಸನ್ನದ್ಧವಾಗಿದೆ. ಸ್ಥಳೀಯ ಎಲೆಮರೆಯ ಕಲಾವಿದರು ಕೊಡಗಿನ ಸಂಸ್ಕøತಿ ಉಳಿಸುವತ್ತ ಚಿಂತನೆ ಮಾಡಬೇಕು ಎಂದರು.
ಈ ಸಂದರ್ಭ ಜಿ.ಪಂ. ಸದಸ್ಯ ಬಾನಂಡ ಪ್ರತ್ಯು, ಕುಟುಂಬ ಅಧ್ಯಕ್ಷ ಅಳಮೇಂಗಡ ವಿವೇಕ್ ಅಯ್ಯಪ್ಪ, ಉಪಾಧ್ಯಕ್ಷೆ ನದಿರಾ ಸೋಮಯ್ಯ, ಅಳಮೇಂಗಡ ಹಾಕಿ ಕಪ್ ಅಧ್ಯಕ್ಷ ಅಳಮೇಂಗಡ ಪೊನ್ನಪ್ಪ, ಮಾಧ್ಯಮ ಸಲಹೆಗಾರ ರಮೇಶ್ ಪೊನ್ನಪ್ಪ, ಖಜಾಂಚಿ ರವಿ, ಸಲಹೆಗಾರ ವಿಠಲ್, ಬಾಳೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ಬಾಳೆಲೆ ಸೆಂಟ್ರಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೃಷ್ಣ ಗಣಪತಿ, ಜೂನಿಯರ್ ಕಾಲೇಜು ಪ್ರಾಂಶುಪಾಲ ಕಾಡ್ಯಮಾಡ ಪಿ. ಪೊನ್ನಮ್ಮ ಉಪಸ್ಥಿತರಿದ್ದರು.
ಗ್ರೀಷ್ಮಾ ಅಪ್ಪಾಜಿ ಪ್ರಾರ್ಥಿಸಿ, ಕ್ರಿಕೆಟ್ ಕಪ್ ಅಧ್ಯಕ್ಷ ಬೋಸ್ ಮಂದಣ್ಣ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ಚೆಂಗಪ್ಪ ವಂದಿಸಿ, ಕಾಂಡೇರ ಡಾನ್ ಕುಶಾಲಪ್ಪ ಹಾಗೂ ತಿರುನೆಲ್ಲಿಮಾಡ ರಮಾನಂದ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನೀಡುವ ಮೂಲಕ ವಿಶೇಷ ರಂಗು ಮೂಡಿಸಲಾಯಿತು. ಹುದಿಕೇರಿ ಮಹಾದೇವ ಸಂಘದಿಂದ ಉಮ್ಮತ್ತಾಟ್, ಕತ್ತಿಯಾಟ್, ಕೋಲಾಟ್ ಪ್ರದರ್ಶನವಾಯಿತು. ತೋರ ಕುಡಿಯ ಜನಾಂಗದವರು ಉರ್‍ಟಿಕೊಟ್ ಆಟ್ ಮೂಲಕ ಗಮನ ಸೆಳೆದರು.
ಕುಟುಂಬದ ಹಿರಿಯರಾದ ಅಳಮೇಂಗಡ ಎ. ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಕೊಡವ ಕ್ರಿಕೆಟ್ ಅಕಾಡೆಮಿ ಧ್ವಜಾರೋಹಣ ಗೊಳಿಸಿದರು. ಎಂಎಲ್ಸಿ ಸುನಿಲ್ ಸುಬ್ರಮಣಿ ಅಳಮೇಂಗಡ ಕುಟುಂಬದ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಉದ್ಯಮಿ ನಂಬುಡುಮಾಡ ನರೇನ್ ಕಾರ್ಯಪ್ಪ ಬ್ಯಾಟ್ ಮಾಡುವ ಮೂಲಕ ಅಳಮೇಂಗಡ ಕ್ರಿಕೆಟ್ ಕಪ್‍ಗೆ ಚಾಲನೆ ನೀಡಿದರು. ಜಿ.ಪಂ. ಸದಸ್ಯ ಬಾನಂಡ ಪ್ರತ್ಯು ಬೌಲ್ ಮಾಡಿ ಗಮನ ಸೆಳೆದರು.
ಅಳಮೇಂಗಡಕ್ಕೆ ಸೋಲು: ಉದ್ಘಾಟನೆ ಪ್ರಯುಕ್ತ ನಡೆದ ಪ್ರದರ್ಶನ ಪಂದ್ಯದಲ್ಲಿ ಅತಿಥೇಯ ಅಳಮೇಂಗಡ ಸೋಲು ಅನುಭವಿಸಿತು. ಬಾಳೆಲೆ ಇಲೆವೆನ್ ವಿರುದ್ದ ನಡೆದ ಪಂದ್ಯದಲ್ಲಿ 6 ರನ್‍ಗಳಿಂದ ಸೋತು ನಿರಾಸೆ ಮೂಡಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಳೆಲೆ 4 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿತು. ಅಳಮೇಂಗಡ 4 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿತು.
ಕ್ರಿಕೆಟ್ ಕಪ್‍ನ ಮೊದಲ ಪಂದ್ಯದಲ್ಲಿ ಕಾಕಮಾಡ (ಕಿರುಗೂರು) ಗೈರಿನಿಂದಾಗಿ ಕಾಂಡೇರ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ತೀರ್ಪುಗಾರರಾಗಿ ಮಾಚಂಗಡ ದರ್ಶನ್ ಸೋಮಣ್ಣ ಹಾಗೂ ಚೆಕ್ಕೇರ ನವೀನ್ ಕಾರ್ಯನಿರ್ವಹಿಸಿದರು.