ವೀರಾಜಪೇಟೆ, ಏ. 23: ವೀರಾಜಪೇಟೆ ತಾಲೂಕಿನಾದ್ಯಂತ ಬರಗಾಲ. ಕುಡಿಯಲು ನೀರಿಲ್ಲ, ವಾಣಿಜ್ಯ ಬೆಳೆ ಕಾಫಿಯ ದರ ಕುಸಿತ, ಭತ್ತದ ಗದ್ದೆಗಳೆಲ್ಲವು ಹಡಲು ಬಿದ್ದಿದೆ. ಬೆರಳೆಣಿಕೆ ಕಡೆಗಳಲ್ಲಿ ಶುಂಠಿ ಕೃಷಿ. ಬಿರುಬಿಸಿಲಿನ ನಡುವೆ ಬೋರ್ಗರೆ ಯುವ ಚಂಡೆ ವಾಧ್ಯಗಳ ಆರ್ಭಟ, ಮೈಗೆ ಬಣ್ಣ ಹಚ್ಚಿ ನಿಜವಾದ ವ್ಯಾಘ್ರ ಬೆಚ್ಚಿ ಬೀಳುವಂತಹ ಹುಲಿವೇಷ ದಾರಿಗಳು, ಗ್ರಾಮ ದೇವತೆಗೆ ಇಷ್ಟ ಎಂದು ಮೈಗೆ ಕೆಸರು ಮೆತ್ತಿಕೊಂಡ ಗ್ರಾಮಸ್ಥರು, ಹುಲ್ಲುಭೂತ ವೇಷಧಾರಿಗಳು ವಿಭಿನ್ನ ರೀತಿಯ ರಾಜಕೀಯ ವ್ಯಕ್ತಿಗಳು, ಸುಂದರ ಮೈಕಟ್ಟು ಹೊಂದಿರುವ ಪಡ್ಡೆ ಹುಡುಗರು ಯುವತಿಯರ ವೇಷ ಧರಿಸಿ ತಮ್ಮ ಹರಕೆಯನ್ನು ತೀರಿಸಿದರು. ಇವೆಲ್ಲ ಐತಿಹಾಸಿಕ ಹಿನ್ನಲೆ ಹೊಂದಿರುವ ಚಂಬೆಬೆಳ್ಳೂರು ಬೇಡು ಹಬ್ಬದ ವಿಶಿಷ್ಟತೆಯಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವದು ಈ ಹಬ್ಬದ ಮತ್ತೊಂದು ವಿಶೇಷವಾಗಿದೆ.

‘ಚಂಬೆಬೆಳ್ಳೂರ್ ಬೋಡ್ ನಮ್ಮೆ' ಎಂದೇ ಹೆಸರುವಾಸಿಯಾಗಿರುವ ಹಬ್ಬವು ಪ್ರತಿ ವರ್ಷ ಏಪ್ರಿಲ್ 3ನೇ ವಾರದಲ್ಲಿ ನಡೆಯುತ್ತದೆ. ಈ ಹಬ್ಬವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಪಶ್ಚಿಮಾಭಿಮುಖವಾಗಿ ಇರುವ ದೇವಾಲಯವು “ಪಡ್‍ಞಂರ್ ಮೊಗಬೆಚ್ಚ ಕಾಳಿ” ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ಈ ಬೇಡು ಹಬ್ಬಕ್ಕೆ ಕೊಡವ ಕ್ಯಾಲೆಂಡರ್ ಪ್ರಕಾರ ಎಡಮ್ಯಾರ್ 1 ಏಪ್ರಿಲ್ 13 ರಂದು ಕಟ್ಟು ಬಿದ್ದು, 21ರಂದು ಪಟ್ಟಣಿಯ ನಂತರ ದೇವರ ಕುದುರೆ, 22ರಂದು ರಾತ್ರಿ ದೇವರ ವೇಷ ಧರಿಸುವ\ದರ ಮೂಲಕ ಬೇಡು ಹಬ್ಬಕ್ಕೆ ಚಾಲನೆ ನೀಡಲಾಯಿತು. ಪ್ರತಿ ಮನೆಯಿಂದ ತಲಾ ಒಬ್ಬರಿಗೊಬ್ಬರಂತೆ ವಿವಿಧ ರೀತಿಯ ವೇಷ ಧರಿಸಿ ರಾತ್ರಿಯಿಡಿ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಗಳಿಸಿದ ಹಣವನ್ನು ಮರುದಿನ (23ರಂದು) ಅಪರಾಹ್ನ 3 ಗಂಟೆಗೆ ಭದ್ರಕಾಳಿ ದೇವಾಲಯಕ್ಕೆ ತೆರಳಿ ಹರಕೆಯನ್ನು ಒಪ್ಪಿಸುತ್ತಾರೆ. ಈ ಹಬ್ಬಕ್ಕೆ ತವರುಮನೆ ಹೆಣ್ಣುಮಕ್ಕಳು, ಅನ್ಯ ಊರುಗಳಿಗೆ ಕೆಲಸ ಅರಸಿ ನೆಲೆ ನಿಂತವರು ರಜೆಯಲ್ಲಿ ಬಂದು ಪಾಲ್ಗೊಳ್ಳುತ್ತಾರೆ.

ಹಿನೆÀ್ನಲೆ

ಈ ಹಿಂದೆ ಚಂಬೆಬೆಳ್ಳೂರು ಗ್ರಾಮದಲ್ಲಿ 101 ಕುಟುಂಬಗಳು ವಾಸಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ಇದೇ ಗ್ರಾಮ ಜಿಲ್ಲೆಯಲ್ಲಿ ಅತೀ ದೊಡ್ಡ ಊರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಾಲಗಳು ಉರುಳಿದಂತೆ ಅಂದಾಜು 30ಕ್ಕೂ ಹೆಚ್ಚು ಕುಟುಂಬಗಳು ಸೇರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

ಈ ಬೇಡು ಹಬ್ಬದಲ್ಲಿ ದೇವರಿಗೆ ಇಷ್ಟವಾದ ದೋಳ್‍ಪಾಟ್, ಹುಲಿ ವೇಷ, ಹುಲ್ಲುಭೂತ, ಕೆಸರುವೇಷ (ಬಂಡ್‍ಕಳಿ) ಕರಡಿವೇಷ, ಸೇರಿದಂತೆ ಇಂದಿನ ಪರಿಸರಕ್ಕೆ ಅನುಗುಣವಾಗುವ ರೀತಿಯಲ್ಲಿ ರಾಜಕೀಯ ಹಾಗೂ ವಿವಿಧ ಸ್ವಾಮೀಜಿಗಳ ವೇಷ ಭೂಷಣಗಳ ಅನುಕರಣೆ ಹಬ್ಬದ ವಿಶೇಷವಾಗಿತ್ತು. ಅಂದಾಜು 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ದೇವರ ಕಟ್ಟು ಬಿದ್ದ ನಂತರ ಊರಿನಲ್ಲಿ ಯಾವದೇ ಪ್ರಾಣಿವದೆ, ಹಸಿಮರ ಕಡೆಯುವದು, ಗುಂಡು ಹೊಡೆಯುವದು ನಿಷೇಧವಾಗಿದೆ. ಈ ನಿಷೇಧವನ್ನು ಮುರಿಯುವ ಸಲುವಾಗಿ ವೇಷಧಾರಿಗಳು ಸೇರಿದಂತೆ ಊರಿನ ಜನರು ದೇವಸ್ಥಾನ ಪ್ರವೇಶಿಸುವಾಗ ಹಸಿಮರ ಕಡಿಯುವ ಪ್ರತೀಕವಾಗಿ ಹಸಿ ಸೊಪ್ಪನ್ನು ದೇವರಿಗೆ ಅರ್ಪಿಸಿದರು.

-ಚಾರಿಮಂಡ ಬೋಪಣ್ಣ