ಕುಶಾಲನಗರ, ಏ. 24: ಹಾರಂಗಿ-ಯಡವನಾಡು ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವದಾಗಿ ಆರೋಪಿಸಿ ಹುದುಗೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ಹಾರಂಗಿಯಿಂದ 1150 ಮೀ. ಉದ್ದದ ಸಂಪರ್ಕ ರಸ್ತೆಯನ್ನು ರೂ. 1 ಕೋಟಿ 43 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ಇತ್ತೀಚೆಗಷ್ಟೆ ಉಸ್ತುವಾರಿ ಸಚಿವರು ಭೂಮಿಪೂಜೆ ನೆರವೇರಿಸಿದ್ದರು.
ಕಳೆದ ಕೆಲವು ದಿನಗಳಿಂದ ಅಂದಾಜು ಪಟ್ಟಿ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವಲ್ಲಿ ನಿರ್ಲಕ್ಷ್ಯ ತಾಳುತ್ತಿದ್ದಾರೆ ಎಂದು ಸ್ಥಳೀಯ ಪ್ರಮುಖರಾದ ಐ.ಎಸ್. ಗಣೇಶ್, ದೊರೆ ರಘುಪತಿ, ಚೇತನ್, ನಂದ ಅವರುಗಳ ನೇತೃತ್ವದಲ್ಲಿ ಗ್ರಾಮಸ್ಥರು ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭ ಸ್ಥಳಕ್ಕೆ ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜ್, ಉಸ್ತುವಾರಿ ಅಧಿಕಾರಿ ಕಿರಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಣಮಟ್ಟ ಪರಿಶೀಲನೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವದು. ಅದುವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸರಬರಾಜಾಗುತ್ತಿರುವ ಜಲ್ಲಿ ಕಲ್ಲುಗಳ ಹಾಗೂ ಇತರೆ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಸದೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಕ್ಷೇತ್ರದ ಶಾಸಕರ ಗಮನಕ್ಕೆ ತರಲಾಗಿದ್ದು, ಅವರಿಂದ ಗುಣಮಟ್ಟದ ಕಾಮಗಾರಿ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಗುತ್ತಿಗೆದಾರರು ಸರಿಯಾದ ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.