ಸೋಮವಾರಪೇಟೆ, ಏ.24: ದೇಶದ ಉತ್ಪಾದನಾ ವಲಯದಲ್ಲಿ ಪ್ರಾಮುಖ್ಯತೆ ಪಡೆದಿರುವ ಕಾಫಿಗೆ ಅಂತರ್ರಾಷ್ಟ್ರೀಯ ಮಾನ್ಯತೆ ಇದ್ದರೂ ಸಹ ಕಾಫಿ ತೋಟಗಳ ಮಾಲೀಕರ ಬದುಕು ದುಸ್ತರವಾಗುತ್ತಿದೆ ಎಂದು ಭಾರತ ಕಾಫಿ ಮಂಡಳಿಯ ಸದಸ್ಯ, ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅಭಿಪ್ರಾಯ ಪಟ್ಟರು.
ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಇಲ್ಲಿನ ವಿ.ಎಸ್.ಎಸ್.ಎನ್. ಸಹಕಾರ ಭವನದಲ್ಲಿರುವ ಬೆಳೆಗಾರರ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬೆಳೆಗಾರರ ಸಭೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾಫಿ ಮಾರುಕಟ್ಟೆ ಮೇಲೆ ನಿಯಂತ್ರಣ ಇಲ್ಲದಿರುವದರಿಂದ ದಿನೇ ದಿನೇ ಕಾಫಿ ದರ ಏರುಪೇರಾಗುತ್ತಿದೆ. ಕಾಫಿ ಬೆಳೆಗಾರರಿಗೆ ಕಾಫಿ ದರದ ನಿಜ ಸ್ಥಿತಿ ನಿಖರವಾಗಿ ತಿಳಿಯುತ್ತಿಲ್ಲ. ಜತೆಗೆ ಡಾಲರ್ ಮತ್ತು ಸೆಂಟ್ಸ್‍ನ ಮೌಲ್ಯದಲ್ಲಿಯೂ ಏರುಪೇರಾಗುತ್ತಿದೆ. ಅಂತರ್ರಾಷ್ಟ್ರೀಯ ಮಾರುಕಟ್ಟೆ ದರದ ನಿಖರ ಮಾಹಿತಿಯನ್ನು ಮಾಧ್ಯಮಗಳ ಮೂಲಕ ತಿಳಿಸಿದರೆ ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಫಿ ಮಂಡಳಿಯ ನಿವೃತ್ತ ಹಿರಿಯ ಸಂಪರ್ಕಾಧಿಕಾರಿ ಮೋಹನ್‍ದಾಸ್ ಮಾತನಾಡಿ, ಬೆಳೆಗಾರರ ಸಂಘದವರು ಪ್ರತಿ ತಿಂಗಳು ಸಭೆಯನ್ನು ಆಯೋಜಿಸುವ ಮೂಲಕ ಬೆಳೆಗಾರರ ಸಮಸ್ಯೆಯನ್ನು ಕಾಫಿ ಮಂಡಳಿ ಮೂಲಕ ಕೇಂದ್ರ ಸರಕಾರಕ್ಕೆ ತಿಳಿಸಬೇಕು. ಮಂಡಳಿಯ ವರದಿಯನ್ನೇ ಸರಕಾರವು ಪ್ರಥಮವಾಗಿ ಪರಿಶೀಲಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಮಾತನಾಡಿ, ಕಾಫಿ ಮಂಡಳಿಯಿಂದ 2016-17ನೇ ಸಾಲಿಗೆ ನೀಡುತ್ತಿರುವ ವಿವಿಧ ಸಲಕರಣೆ, ಹೊಸತೋಟಗಳ ಅಭಿವೃದ್ಧಿ ಮುಂತಾದ ಸಹಾಯಧನ ಯೋಜನೆಯನ್ನು ಸ್ಥಗಿತಗೊಳಿಸಿದ್ದು, ಬೆಳೆಗಾರರ ಹಿತದೃಷ್ಟಿಯಿಂದ ಯೋಜನೆಯನ್ನು ಕೈಬಿಡದೆ ಮುಂದುವರೆಸಿಕೊಂಡು ಹೋಗಬೇಕೆಂದು ಮನವಿ ಮಾಡಿದರು.
ಕಾಳು ಮೆಣಸಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಫಸಲ್ ವಿಮಾ ಯೋಜನೆಯನ್ನು ರೂಪಿಸಿರುವದು ಅವೈಜ್ಞಾನಿಕವಾಗಿದೆ. ವಿಮಾ ಯೋಜನೆ ನೀತಿ ಸಮಿತಿಯಲ್ಲಿ ಬೆಳೆಗಾರರ ಪ್ರತಿನಿಧಿಗಳಿಗೆ ಸ್ಥಾನ ಇಲ್ಲ. ಸಮಿತಿಯಲ್ಲಿ ಕೇವಲ ಅಧಿಕಾರಿಗಳೇ ಇದ್ದು, ವಿಮಾ ನೀತಿಯಲ್ಲಿ ಅನಾನುಕೂಲವೇ ಹೆಚ್ಚಾಗಿದೆ. ಅರಣ್ಯದ ಆಸುಪಾಸಿನಲ್ಲಿ ವ್ಯವಸಾಯ ಮಾಡಿಕೊಂಡಿರುವ ರೈತರಿಗೆ ಕಸ್ತೂರಿ ರಂಗನ್ ವರದಿ ಮಾರಕವಾಗಿ ಪರಿಣಮಿಸಿದ್ದು, ಕೇಂದ್ರ ಸರಕಾರ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಆಗ್ರಹಿಸಿದರು.
ವೇದಿಕೆಯಲ್ಲಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಡದಂಟೆ ಲವ, ಕೆ.ಬಸಪ್ಪ, ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ಮತ್ತಿತರರು ಉಪಸ್ಥಿತರಿದ್ದರು.