ಸೋಮವಾರಪೇಟೆ, ಏ. 24: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ರಸ್ತೆಯಲ್ಲೇ ಮಾಲೀಕರುಗಳ ವಾಗ್ವಾದ ಮುಂದುವರೆದ ಹಿನ್ನೆಲೆ ಒಂದು ಗಂಟೆಗೂ ಅಧಿಕ ಕಾಲ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಇಂದು ಸಂಜೆ ನಡೆಯಿತು.
ಕೋವರ್ಕೊಲ್ಲಿ ಕಡೆಯಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಕುಸುಬೂರು ಗ್ರಾಮ ನಿವಾಸಿ ಲಿಂಗರಾಜ್ ಎಂಬವರಿಗೆ ಸೇರಿದ ಕಾರು ಹಾಗೂ ನಗರದಿಂದ ಆಲೇಕಟ್ಟೆ ಕಡೆಗೆ ತೆರಳುತ್ತಿದ್ದ ರಾಜಪ್ಪ ಅವರಿಗೆ ಸೇರಿದ ಕಾರುಗಳ ನಡುವೆ ಇಲ್ಲಿನ ವಿವೇಕಾನಂದ ವೃತ್ತದ ಬಳಿ ಢಿಕ್ಕಿ ಸಂಭವಿಸಿತು.
ಯಾರದು ತಪ್ಪು-ಯಾರು ಸರಿ ಎಂಬ ವಿಚಾರದಲ್ಲಿಯೇ ಎರಡೂ ಕಾರುಗಳ ಮಾಲೀಕರ ನಡುವೆ ರಸ್ತೆಯ ನಡುಭಾಗದಲ್ಲಿಯೇ ವಾಗ್ವಾದ ನಡೆದಿದ್ದರಿಂದ ಇತರ ವಾಹನಗಳ ಓಡಾಟಕ್ಕೆ ತಡೆಯುಂಟಾಗಿತ್ತು.
ಹೀಗಾಗಿ ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡು ವಾಹನಗಳ ಸವಾರರು, ಬಸ್ಗಳಿದ್ದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.
ನಂತರ ಇಲ್ಲಿನ ಪೊಲೀಸ್ ಠಾಣೆಯ ಪೇದೆ ಜಗದೀಶ್ ಅವರು ಆಗಮಿಸಿ ಕಾರುಗಳನ್ನು ರಸ್ತೆಯಿಂದ ಬದಿಗೆ ಸರಿಸುವಂತೆ ಸೂಚಿಸಿದ ನಂತರ ಸಂಚಾರ ಸಹಜ ಸ್ಥಿತಿಗೆ ಮರಳಿತು.
ಘಟನೆಯಿಂದ ರಾಜಪ್ಪ ಅವರ ಕಾರಿನ (ಕೆಎ 12 ಪಿ 4564) ಎಡಭಾಗ ಹಾಗೂ ಲಿಂಗರಾಜ್ ಅವರ ಕಾರಿನ ಮುಂಭಾಗ ಜಖಂಗೊಂಡಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ.