ನವಭಾರತ ನಿರ್ಮಾಣಕ್ಕೆ ಒಗ್ಗಟ್ಟು ಪ್ರದರ್ಶಿಸಲು ಕರೆ
ನವದೆಹಲಿ, ಏ. 23: ‘ನವಭಾರತ ನಿರ್ಮಾಣಕ್ಕಾಗಿ ರಾಜ್ಯಗಳೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಮೋದಿ, ‘ಜಿಎಸ್ಟಿ ದೇಶದ ಏಕತೆಯನ್ನು ಪ್ರತಿಬಿಂಬಿಸುತ್ತದೆ. ದೇಶದ ಎಲ್ಲಾ ರಾಜ್ಯಗಳೂ ಆರ್ಥಿಕ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ನವಭಾರತ ನಿರ್ಮಾಣ ಸಾಧ್ಯ’ ಎಂದರು. ಮುಂದಿನ 15 ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲು ಈ ಸಭೆ ಕರೆಯಲಾಗಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉಳಿದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಭೆಗೆ ಹಾಜರಾಗಿದ್ದರು.
ಪ್ರತಾಪ್ ಸಿಂಹ ವಿರುದ್ಧ ಬಿಜೆಪಿ ಅಸಮಾಧಾನ
ಬೆಂಗಳೂರು, ಏ. 23: ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಸೋಲಿನ ಬಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯರೂಪ್ಪ ನೇತೃತ್ವದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ ಹೊರ ಹೊಮ್ಮಿದೆ. ಗುಂಡ್ಲಪೇಟೆ ಚುನಾವಣೆಯಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಇತ್ತು. ಆದರೆ ಗೀತಾ ಮಹದೇವ್ ಪ್ರಸಾದ್ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ ಚುನಾವಣೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಗೀತಾ ಅವರ ಪರ ಅನುಕಂಪ ಇರುವಾಗ ಇಂಥಹ ಹೇಳಿಕೆ ಬಿಜೆಪಿಗೆ ಸಾಕಷ್ಟು ಹಿನ್ನೆಡೆ ಉಂಟು ಮಾಡಿತು. ಅಷ್ಟೇ ಅಲ್ಲದೇ ಪ್ರತಾಪ್ ಸಿಂಹ ಹೇಳಿಕೆಗೆ ಬಿಜೆಪಿ ಮುಖಂಡರಿಂದಲೇ ಖಂಡನೆ ವ್ಯಕ್ತವಾಯಿತು. ಆತ್ಮಾವಲೋಕನ ಸಭೆ ಬಳಿಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಹಣದ ಹೊಳೆ ಹರಿಸಿದ ನಾಯಕರು ಮತದಾರರ ಖರೀದಿ ಮಾಡುವ ಮೂಲಕ ಅಕ್ರಮ ನಡೆಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಒಳ ಒಪ್ಪಂದ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಕೊಳವೆ ಬಾವಿಯಲ್ಲಿ ಸಿಲುಕಿದ ಬಾಲಕಿ
ಅಥಣಿ, ಏ. 23: ಬೆಳಗಾವಿಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಹೊರವಲಯದಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಗೆ ಬಿದ್ದ 6 ವರ್ಷದ ಕಾವೇರಿಯನ್ನು ಮೇಲೆತ್ತಲು ಶನಿವಾರ ರಾತ್ರಿಯಿಂದ ನಡೆಯುತ್ತಿರುವ ಕಾರ್ಯಾಚರಣೆ ಮುಂದುವರೆದಿದ್ದು, ರಕ್ಷಣಾ ಕಾರ್ಯಾಚರಣೆಗೆ ಕಲ್ಲು ಬಂಡೆ ಅಡ್ಡಿಯಾದ ಪರಿಣಾಮ ಸುರಂಗದ ಬದಲಾಗಿ ಬೋರ್‍ವೆಲ್ ಕೊರೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದಕ್ಕೂ ಮೊದಲು ಕೊಳವೆ ಬಾವಿ ಮೂಲಕವೇ ಅಂದರೆ ಮೇಲ್ಮುಖವಾಗಿ ಬಾಲಕಿಯನ್ನು ಹಗ್ಗದ ಮೂಲಕ ಹುಕ್ ಬಳಸಿ ಮೇಲಕ್ಕೆ ಎತ್ತಲು ನಾಲ್ಕು ಬಾರಿ ಪ್ರಯತ್ನಿಸಲಾಯಿತು. ಆದರೆ ನಾಲ್ಕು ಬಾರಿಯೂ ವಿಫಲವಾದ ಪರಿಣಾಮ ಅದನ್ನು ಕೈಬಿಡಲಾಯಿತು. ಮಗುವಿನ ಕೈಗಳು ಸಿಸಿ ಕ್ಯಾಮರಾದಲ್ಲಿ ಕಾಣಿಸುತ್ತಿದ್ದು, ಬಾಲಕಿ ಉಸಿರುಗಟ್ಟಿರುವ ಎಲ್ಲಾ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೂ ಬಾಲಕಿಯನ್ನು ಜೀವಂತವಾಗಿ ಮೇಲೆತ್ತಲು ರಕ್ಷಣಾ ತಂಡ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.
ತಾಲಿಬಾನ್ ಉಗ್ರರ ಧಾಳಿ : 140 ಸಾವು
ಕಾಬುಲ್, ಏ. 23: ಅಫ್ಘಾನಿಸ್ತಾನದ ಸೇನಾ ಕ್ಯಾಂಪ್ ಮೇಲಿನ ತಾಲಿಬಾನ್ ಉಗ್ರರ ಧಾಳಿಯಲ್ಲಿ ಸಾವಿನ ಸಂಖ್ಯೆ 140ಕ್ಕೆ ಏರಿಕೆಯಾಗಿದೆ. ಮಜರ್ ಇ ಷರೀಫ್ ನಗರದ ಉತ್ತರ ಭಾಗದಲ್ಲಿರುವ ಸೇನಾ ಕ್ಯಾಂಪ್ ಮೇಲೆ ಸುಮಾರು 10 ಮಂದಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಮನಸೋ ಇಚ್ಛೆ ಗುಂಡಿನ ಸುರಿಮಳೆ ಗರೆದಿದ್ದರು. ಈ ಧಾಳಿಯಲ್ಲಿ ಆಫ್ಘಾನಿಸ್ತಾನದ 100ಕ್ಕೂ ಹೆಚ್ಚು ಯೋಧರು ಸೇರಿದಂತೆ 140 ಮಂದಿ ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಕ್ಯಾಂಪ್ ಆಯಕಟ್ಟಿನ ಪ್ರದೇಶದಲ್ಲಿ ಅವಿತಿದ್ದ ಉಗ್ರರು ಗುಂಡಿನ ಮಳೆ ಗರೆದರು. ಉಗ್ರರು ಕೂಡ ಸೇನಾಸಮವಸ್ತ್ರದಲ್ಲೇ ಇದ್ದುದರಿಂದ ಯೋಧರು ಯಾರು? ಉಗ್ರರು ಯಾರು ಎಂಬ ಗೊಂದಲದಿಂದಾಗಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಆಫ್ಘಾನಿಸ್ತಾನ ರಕ್ಷಣಾ ಇಲಾಖೆಯ ವಕ್ತಾರ ದಾವ್ಲತ್ ವಜೀರಿ ಹೇಳಿದ್ದಾರೆ.
ಜೈಲಿನಲ್ಲೇ ಸ್ನಾತಕೋತ್ತರ ಪದವಿ
ನಾಗ್ಪುರ, ಏ. 23: ಜೈಲಿನಲ್ಲಿದ್ದುಕೊಂಡೇ ಮೂವರು ಕೈದಿಗಳು ಪದವಿ ಪಡೆದ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾದ ಪ್ರಸಂಗ ಮಹಾರಾಷ್ಟ್ರದ ನಾಗ್ಪುರ ಜೈಲಿನಲ್ಲಿ ನಡೆದಿದೆ. ಜೀವಾವಧಿ ಮತ್ತು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮೂವರು ಕೈದಿಗಳು ನಾಗ್ಪುರ ಜೈಲಿನಲ್ಲಿದ್ದುಕೊಂಡೇ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮೂಲಗಳ ಪ್ರಕಾರ ಮರಣ ದಂಡನೆಗೆ ಗುರಿಯಾಗಿರುವ ನಾರಾಯಣ ಚೌಧರಿ (35 ವರ್ಷ) 2012ರಲ್ಲಿ ಎಂಎ ಕೋರ್ಸ್‍ಗಾಗಿ ಇಗ್ನೊದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರೆ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವಿಜಯ್ ಮಹಾಕಾಲ್ಕರ್ (30 ವರ್ಷ) ಬಿಎ ಮತ್ತು ಶ್ಯಾಮರಾವ್ ವಾಘ್ಮಾರೆ (45 ವರ್ಷ) ಎಂಎ ಸೋಷಿಯಾಲಜಿ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಎಲ್ಲ ಮೂವರು ಕೈದಿಗಳು ತಮ್ಮ ಪದವಿಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶೀಘ್ರವೇ ಜೈಲಿನ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನಿಸಲಾಗುವದು ಎಂದು ನಾಗಪುರದಲ್ಲಿರುವ ಇಗ್ನೊದ ಪ್ರಾದೇಶಿಕ ನಿರ್ದೇಶಕ ಪಿ. ಶಿವಸ್ವರೂಪ್ ಅವರು ತಿಳಿಸಿದ್ದಾರೆ.
ಅಮೇರಿಕಾ ಮೂಲದ ವ್ಯಕ್ತಿಯ ಬಂಧನ
ದಕ್ಷಿಣ ಕೊರಿಯಾ, ಏ. 23: ಮಾಜಿ ಕೊರಿಯನ್-ಅಮೇರಿಕನ್ ಪೆÇ್ರಫೆಸರ್ ಅನ್ನು ಉತ್ತರ ಕೊರಿಯಾದ ಪಯೋಂಗ್ಯಾಂಗ್‍ನಲ್ಲಿ ಬಂಧಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಯೊನ್ಯಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಯೋಂಗ್ಯಾಂಗ್‍ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೇರಿಕಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಮೂಲಕ ಮೂವರು ಅಮೇರಿಕಾ ಮೂಲದ ವ್ಯಕ್ತಿಯನ್ನು ಉತ್ತರ ಕೊರಿಯಾ ಅಧಿಕಾರಿಗಳು ಬಂಧಿಸಿದ್ದಾರೆ. ಕೇವಲ ಕಿಮ್ ಎಂಬ ಸರ್ ನೇಮ್ ಇದ್ದಿದ್ದರಿಂದಲೇ ಆತನನ್ನು ಉತ್ತರ ಕೊರಿಯಾ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಯಾಕೆ ಬಂಧಿಸಿದ್ದಾರೆ ಎಂಬ ಮಾಹಿತಿಯನ್ನು ಉತ್ತರ ಕೊರಿಯಾ ಸರ್ಕಾರ ನೀಡಿಲ್ಲ.
ಅಗ್ನಿ ಅವಘಡದಲ್ಲಿ ಇಬ್ಬರ ಸಾವು
ಮುಂಬೈ, ಏ. 23: ಮುಂಬೈ ಕಾರು ಶೋ ರೂಂ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ನವೀ ಮುಂಬೈನ ಕರ್ಘಾರ್ ಪ್ರದೇಶದಲ್ಲಿರುವ ಮಾರುತಿ ಸುಜುಕಿ ಕಾರು ಶೋ ರೂಂನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ 5 ಅಗ್ನಿ ಶಾಮಕ ವಾಹನ ಹಾಗೂ ಹಲವು ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಅಷ್ಟು ಹೊತ್ತಿಗಾಗಲೇ ಷೋ ರೂಂ ಒಳಗಿದ್ದ ಇಬ್ಬರು ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.
ರೋಹನ್ ಬೋಪಣ್ಣ ಜೋಡಿಗೆ ಡಬಲ್ಸ್ ಕಿರೀಟ
ಮೊನಾಕೋ, ಏ. 23: ಮೊನಾಕೋದಲ್ಲಿ ನಡೆದ ಮಾಂಟೆ ಕಾರ್ಲೋ ಮಾಸ್ಟರ್ಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಉರುಗ್ವೆಯ ಪ್ಯಾಬ್ಲೋ ಕ್ಯೂವಾಸ್ ಜೋಡಿ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಪ್ಯಾಬ್ಲೋ ಕ್ಯೂವಾಸ್ ಬಲಿಷ್ಠ ಸ್ಪೈನ್‍ನ ಫೆಲಿಸಿಯಾನೋ ಲೊಪೇಜ್ ಹಾಗೂ ಮಾರ್ಕ್ ಲೊಪೇಜ್ ವಿರುದ್ಧ 6-3 3-6 10-4 ನೇರ ಸೆಟ್‍ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಆ ಮೂಲಕ 2017ನೇ ಸಾಲಿನ ಮಾಂಟೆ ಕಾರ್ಲೋ ಮಾಸ್ಟರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮೊದಲ ಸೆಟ್ 6-3 ಅಂತರದಿಂದ ಗೆದ್ದ ರೋಹನ್ ಬೋಪಣ್ಣ-ಪ್ಯಾಬ್ಲೋ ಕ್ಯೂವಾಸ್ ಜೋಡಿ ಅದೇ ಹುರುಪಿನಲ್ಲಿ 2ನೇ ಸೆಟ್‍ಗೆ ಕಣಕ್ಕಳಿಯಿತು. ಆದರೆ ಫೆಲಿಸಿಯಾನೋ ಲೊಪೇಜ್ ಹಾಗೂ ಮಾರ್ಕ್ ಲೊಪೇಜ್ ಅವರ ಪ್ರಬಲ ಹೋರಾಟದಿಂದಾಗಿ 3-6 ಸೆಟ್‍ಗಳಿಂದ 2ನೇ ಸೆಟ್ ಅನ್ನು ಕಳೆದುಕೊಂಡರು. ಆದರೆ ಮೂರನೇ ಹಾಗೂ ಅಂತಿಮ ಸೆಟ್‍ನಲ್ಲಿ ಭರ್ಜರಿಯಾಗಿ ವಾಪಸ್ ಆದ ಬೋಪಣ್ಣ- ಕ್ಯೂವಾಸ್ ಜೋಡಿ 10-4 ಬಾರಿ ಅಂತರದಿಂದ ಮೂರನೇ ಸೆಟ್ ಅನ್ನು ಜಯಿಸುವ ಮೂಲಕ ಭರ್ಜರಿ ಜಯ ಸಾಧಿಸಿದರು.