ಮಡಿಕೇರಿ, ಏ. 23: ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯ ವತಿಯಿಂದ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಅತ್ಯುತ್ತಮ ಸಾಧನೆ ಮಾಡಿದ ಜಿ.ಪಂ. ಹಾಗೂ ಗ್ರಾಮ ಪಂ.ಗೆ ನೀಡುವ 2015-16ನೇ ಸಾಲಿನ ಪಂಚಾಯಿತಿ ಸಶಕ್ತೀಕರಣ ಪುರಸ್ಕಾರಕ್ಕೆ ಕೊಡಗು ಜಿ.ಪಂ. ಹಾಗೂ ಪಾಲಿಬೆಟ್ಟ, ಸಂಪಾಜೆ ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ತಾ. 24 ರಂದು (ಇಂದು) ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಲಿರುವ ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರಾಜ್ಯಕ್ಕೆ ಒಟ್ಟು 7 ಪ್ರಶಸ್ತಿಗಳು ದೊರಕಿದ್ದು ಮೂರು ಪ್ರಶಸ್ತಿಗಳು ಕೊಡಗಿನ ಪಾಲಾಗಿದೆ. ರಾಜ್ಯದ 30 ಜಿ.ಪಂ.ಗಳ ಪೈಕಿ ಕೊಡಗು ಜಿ.ಪಂ. ಮಾಡಿದ ಅತ್ಯುತ್ತಮ ಸಾಧನೆಗೆ ಪಂಚಾಯಿತಿ ಸಶಕ್ತೀಕರಣ ಪುರಸ್ಕಾರ ಲಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾ.ಪಂ., ಶಿವಮೊಗ್ಗ ಜಿಲ್ಲೆಯ ಸಾಗರ ತಾ.ಪಂ. ಹಾಗೂ ಥಿಮೇಟಿಕ್ ವಿಭಾಗದಲ್ಲಿ ತುಮಕೂರು ಜಿಲ್ಲೆಯ ಕೆಸರಮಡು ಗ್ರಾ.ಪಂ., ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಗುಪ್ಪಿ ಗಾ.ಪಂ. ಹಾಗೂ ಸಾಮಾನ್ಯ ವಿಭಾಗದಲ್ಲಿ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾ.ಪಂ., ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾ.ಪಂ.ಗಳು ಪಂಚಾಯಿತಿ ಸಶಕ್ತೀಕರಣ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಕೇಂದ್ರದ ಪಂಚಾಯತ್ ರಾಜ್ ಮಂತ್ರಾಲಯ ಈ ಪ್ರಶಸ್ತಿ ನೀಡುತ್ತಿದೆ. ಕಳೆದ ವರ್ಷ ಆಗಸ್ಟ್‍ನಲ್ಲಿ ಆನ್‍ಲೈನ್ ಮೂಲಕ ಕೇಳಿದ 63 ಪ್ರಶ್ನೆಗಳಿಗೆ ಈ ಸ್ಥಳೀಯಾಡಳಿತ ಸಂಸ್ಥೆಗಳಿಂದ ಉತ್ತರಿಸಲಾಗಿತ್ತು. ಇದಕ್ಕೆ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಿಂದ ರಾರಯಂಕಿಂಗ್ ಇದೆ. ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ.ಗಳು ಮಾಡಿರುವ ಸಾಧನೆ ದಾಖಲೆಗಳ ಸಹಿತ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗಿತ್ತು. ಇದನ್ನು ರಾಜ್ಯ ಮಟ್ಟದ ತಂಡ ಪರಿಶೀಲಿಸಿ ನಂತರ ರಾಷ್ಟ್ರ ಮಟ್ಟಕ್ಕೆ ಕಳುಹಿಸಲಾಗಿತ್ತು. ಇಲ್ಲಿ ಎರಡು ಹಂತದ ತಂಡ ಪರಿಶೀಲನೆಯ ನಂತರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಕೊಡಗು ಜಿ.ಪಂ. ಮಾದರಿ

ಸ್ವಚ್ಛ ಭಾರತ್ ಅಭಿಯಾನ, ಉದ್ಯೋಗ ಖಾತ್ರಿ ಯೋಜನೆ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ಹಣಕಾಸು ಯೋಜನೆ ಸಮರ್ಪಕವಾಗಿ ಬಳಕೆ, ವಸತಿ ನಿರ್ಮಾಣ ಯೋಜನೆ ಸೇರಿದಂತೆ ಮತ್ತಿತರ ಯೋಜನೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಕೊಡಗು ಜಿ.ಪಂ. ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. ಕಳೆದ ವರ್ಷ ರಾಜ್ಯ ಸರ್ಕಾರದಿಂದ ಕೊಡಗು ಜಿ.ಪಂ. ಬಯಲು ಮುಕ್ತ ಶೌಚಾಲಯದಲ್ಲಿ ಗುರಿ ಸಾಧಿಸಿ ಪ್ರಶಸ್ತಿ ಪಡೆದಿತ್ತು. ಕೊಡಗು ಜಿ.ಪಂ. ಸಿಇಒ ಚಾರುಲತಾ ಸೋಮಲ್ ಅವರ ಪರಿಸರ ಕಾಳಜಿ ಹಾಗೂ ಆದಿವಾಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನಲಿ-ಕಲಿ ಯೋಜನೆ ಜಾರಿಗೆ ತಂದಿರುವದು ಪ್ರಶಸ್ತಿ ಲಭಿಸಲು ಕಾರಣವಾಗಿದೆ.

ಪಾಲಿಬೆಟ್ಟ ಗ್ರಾಮ ಪಂಚಾಯಿತಿ

ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾ.ಪಂ. ಇಡೀ ರಾಜ್ಯದಲ್ಲೇ ಶೇ. 99 ರಷ್ಟು ತೆರಿಗೆ ಸಂಗ್ರಹಿಸುತ್ತಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದ ಸಾವಯವ ಗೊಬ್ಬರ ಘಟಕ ಆರಂಭ, ಕುಡಿಯುವ ನೀರಿಗೆ ಮೀಟರ್ ಅಳವಡಿಕೆ, 2011ರಿಂದ ಪವರ್ ಪಾಯಿಂಟ್ ಪ್ರಸ್ತುತಿ ಮೂಲಕ ಗ್ರಾಮಸಭೆ, ಕುಡಿಯುವ ನೀರಿನ ನಲ್ಲಿ ಸಂಪರ್ಕಕ್ಕೆ ಮೀಟರ್ ಅಳವಡಿಸಿ ಮಾದರಿ ಗ್ರಾ.ಪಂ. ಆಗಿ ರೂಪುಗೊಂಡಿದೆ. ಈ ಹಿಂದೆ ನಿರ್ಮಲ ಗ್ರಾಮ ಪುರಸ್ಕಾರ, ಸುವರ್ಣ ನೈರ್ಮಲ್ಯ ಪುರಸ್ಕಾರ, ಗಾಂಧಿ ಗ್ರಾಮ ಪುರಸ್ಕಾರ ಪಡೆದುಕೊಂಡಿದೆ.

ಸಂಪಾಜೆ ಗ್ರಾಮ ಪಂಚಾಯಿತಿ

ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾ.ಪಂ. ತನ್ನ ವ್ಯಾಪ್ತಿಯ 570 ಮನೆಗಳಿಗೆ ಗ್ರ್ಯಾವಿಟಿ ವಾಟರ್ ನೀಡುತ್ತಿದೆ. ಇದು ಇಲ್ಲಿನ ಗ್ರಾ.ಪಂ.ನ ವಿಶೇಷವಾಗಿದೆ. ರಸ್ತೆ, ವಿದ್ಯುತ್, ಮೂಲ ಸೌಕರ್ಯಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. ಸರ್ಕಾರದ ಎಲ್ಲಾ ಅನುದಾನಗಳನ್ನು ಸಮರ್ಪವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನ ಸಮರ್ಪಕವಾಗಿ ಬಳಸಿಕೊಂಡಿದೆ. ಸ್ವಚ್ಛತಾ ಆಂದೋಲನದಲ್ಲಿ 2014-15ರಲ್ಲಿ ರಾಜ್ಯ ಪ್ರಶಸ್ತಿ, ಉದ್ಯೋಗ ಖಾತ್ರಿ, ಆಶ್ರಯ ಮನೆ ವಸತಿ ಯೋಜನೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಗಳಿಸಿದೆ.