ಭಾಗಮಂಡಲ, ಏ. 24: ಕೌಟುಂಬಿಕ ಕಲಹ ಸ್ಫೋಟಗೊಂಡು ಒಬ್ಬಾಕೆ ಗುಂಡೇಟಿಗೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಮೃತಳ ಅಕ್ಕನ ಬಲತೊಡೆಗೆ ಬಿದ್ದ ಮತ್ತೊಂದು ಗುಂಡಿನಿಂದ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ದುರ್ಘಟನೆ ಇಲ್ಲಿಗೆ ಸಮೀಪದ ಚೇರಂಗಾಲ ಗ್ರಾಮದಲ್ಲಿ ನಡೆದಿದೆ.ಇಂದು ಅಪರಾಹ್ನ ಚೇರಂಗಾಲ ಗ್ರಾಮದ ಮೂಲೆಮಜಲು ಚಿದಾನಂದ ಎಂಬಾತ ತನ್ನ ಮನೆ ಬಾಗಿಲಿನಲ್ಲೇ ರೇಣುಕಾ ಹಾಗೂ ಅಮರಾವತಿ ಎಂಬ ಸೋದರಿಯರಿಗೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಈ ವೇಳೆ ತಂಗಿ ಅಮರಾವತಿ (53) ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಎದೆಭಾಗಕ್ಕೆ ಗುಂಡು ಬಿದ್ದ ಪರಿಣಾಮ ಪ್ರಾಣಪಕ್ಷಿ ಹಾರಿಹೋಗಿದೆ.
ಗಲಾಟೆ ಸಂದರ್ಭ ತಂಗಿಯ ರಕ್ಷಣೆಗೆಂದು ಧಾವಿಸಿದ ಅಕ್ಕ ರೇಣುಕಾ ಎಂಬಾಕೆಯ ಬಲತೊಡೆಗೆ ಗುಂಡುಗಳು ಹೊಕ್ಕು ಮಾಂಸ ಛಿದ್ರದೊಂದಿಗೆ ಭಯಾನಕ ಗಾಯ ಉಂಟಾಗಿದೆ. ಗುಂಡಿನ ಶಬ್ದ ಕೇಳಿ ಮೃತಳ ಪತಿ ಪೂವಯ್ಯ ಹಾಗೂ ಪುತ್ರ ಚರಣ್ ಮನೆಯತ್ತ ಧಾವಿಸಿ ಬಂದರೆಂದು ಹೇಳಲಾಗುತ್ತಿದೆ. ಮೃತರ ಇಬ್ಬರು ಪುತ್ರಿಯರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಅಷ್ಟರಲ್ಲಿ ದುಷ್ಕøತ್ಯ ಎಸಗಿರುವ ಆರೋಪಿ ಚಿದಾನಂದ ಕೂಡಲೇ ತನ್ನ ಕಾರಿನಲ್ಲಿ (ಸಿಎನ್-5807) ಭಾಗಮಂಡಲ ಆಸ್ಪತ್ರೆಗೆ ಧಾವಿಸಿದ್ದು, ತನಗೆ ಅಕ್ಕಪಕ್ಕದವರು ಕತ್ತಿಯಿಂದ ಎಡತೊಡೆ ಹಾಗೂ ಎಡಗೈ ಬೆರÀಳುಗಳಿಗೆ ಕಡಿದು ಗಾಯಗೊಳಿಸಿದ್ದಾಗಿ ಹೇಳಿಕೊಂಡಿ ದ್ದಾನೆ.
ಆತನಿಗೆ ಮಡಿಕೇರಿ ಆಸ್ಪತ್ರೆಗೆ ತೆರಳುವಂತೆ ಇಲ್ಲಿನ ವೈದ್ಯರು ತಿಳಿಸಿದ ಮೇರೆಗೆ, ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆರಳಿದ್ದು, ತನ್ನ ಕಾರನ್ನು ಇಲ್ಲಿ ನಿಲ್ಲಿಸಿ ಬೇರೊಂದು ವಾಹನದಲ್ಲಿ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಜೋಡಿ ಬಂಧನ
ಚೇರಂಗಾಲ ಗ್ರಾಮದ ಮೂಲೆಮಜಲು ದಿ. ಪಾಪಯ್ಯ ಹಾಗೂ ಪೂವಯ್ಯ ಸೋದರರಾಗಿದ್ದು, ಇಂದು ಕೊಲೆಗೀಡಾಗಿರುವ ಪೂವಯ್ಯ ಅವರ ಪತ್ನಿ ಅಮರಾವತಿ ಮತ್ತು ಪಾಪಯ್ಯ ಅವರ ಪತ್ನಿ ಗಾಯಾಳು ರೇಣುಕ ಅಕ್ಕ- ತಂಗಿಯರಾಗಿದ್ದಾರೆ.
ನೆರೆಮನೆಯ ಚಿದಾನಂದನಿಗೂ, ಈ ಕುಟುಂಬಕ್ಕೂ ಅನೇಕ ವರ್ಷಗಳಿಂದ ಕಲಹವಿದ್ದು, ಇಂದು ಆರೋಪಿ ತಮ್ಮ ತಾಯಿ ರೇಣುಕಾ ಹಾಗೂ ಚಿಕ್ಕಮ್ಮ ಅಮರಾವತಿಯನ್ನು ಎಳೆದುಕೊಂಡು ಹೋಗಿ ಗುಂಡಿಕ್ಕಿ ಕೊಲೆಗೈದಿದ್ದಾಗಿ, ರೇಣುಕಾ ಪುತ್ರಿ ತೇಜವತಿ ಆರೋಪಿಸಿದ್ದಾಳೆ. ರೇಣುಕಾಳಿಗೆ ಇನ್ನಿಬ್ಬರು ಪುತ್ರಿ ಯರಿದ್ದು, ಎಲ್ಲರೂ ವಿವಾಹ ವಾಗಿದ್ದಾರೆ. ಪಾಪಯ್ಯ ಮೊದಲೇ ಕಾಲವಾಗಿದ್ದಾರೆ.
ಘಟನೆ ಸಂದರ್ಭ ಆರೋಪಿ ಚಿದಾನಂದನ ಮನೆಯೊಳಗೆ, ದುರ್ದೈವಿ ಅಮರಾವತಿಯ ಎದೆಯಿಂದ ಚಿಮ್ಮಿದ ರಕ್ತ ಹಾಗೂ ಮಾಂಸದ ತುಣುಕುಗಳು ಗೋಡೆಗಳಲ್ಲಿ ಹಾರಿರುವ ದೃಶ್ಯ ಕೊಲೆಯ ಭೀಕರತೆಗೆ ಸಾಕ್ಷಿ ಹೇಳುವಂತಿವೆ.
ಸಂಶಯಾಸ್ಪದ ಹೇಳಿಕೆ
ಘಟನೆ ಬೆನ್ನಲ್ಲೇ ಪೂರ್ವ ಯೋಜಿತವೆಂಬಂತೆ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿರುವ ಚಿದಾನಂದ ಸಂಶಯಾಸ್ಪದ ಹೇಳಿಕೆ ನೀಡಿದ್ದಾನೆ. ತನ್ನನ್ನು ಅಮರಾವತಿ, ರೇಣುಕ, ಪೂವಯ್ಯ, ಚರಣ್ ಹಾಗೂ ಭಾರತಿ ಮನೆಗೆ ಬಂದು ಧಾಳಿ ನಡೆಸಿದಾಗ, ತಾನು ಎರಡು ಸುತ್ತು ಗುಂಡು ಹಾರಿಸಿದ್ದಾಗಿ ವಿವರಿಸಿದ್ದಾನೆ. ಎಲ್ಲ ಸೇರಿ ತನ್ನನ್ನು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಕ್ಕಾಗಿ ಮನೆಯ ಮಾಡುವಿನಲ್ಲಿ (ಅಟ್ಟ) ಇರಿಸಿದ್ದ ಕೋವಿ ತಂದು ಗುಂಡು ಹೊಡೆದೆನೆಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ. ಆರೋಪಿಗೆ ತಂದೆ, ತಾಯಿ, ಪತ್ನಿ ಹಾಗೂ ಒಂದು ಮಗುವಿದೆ. ಘಟನೆ ಸ್ಥಳಕ್ಕೆ ಮಡಿಕೇರಿ ಉಪ ಪೊಲೀಸ್ ಅಧೀಕ್ಷಕ ಸೋಮಲಿಂಗಪ್ಪ ಛಬ್ಬಿ, ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್, ಠಾಣಾಧಿಕಾರಿ ಶಿವಪ್ರಕಾಶ್ ಹಾಗೂ ಸಿಬ್ಬಂದಿ ಧಾವಿಸಿ ಮಹಜರು ಕೈಗೊಂಡು ದುರ್ದೈವಿ ಅಮರಾ ವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ದುಷ್ಕøತ್ಯದ ನೈಜ ಚಿತ್ರಣ ಪೊಲೀಸ್ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.
-ಚಿತ್ರ- ವರದಿ: ಕೆ.ಡಿ. ಸುನಿಲ್.