ಮಡಿಕೇರಿ, ಏ. 23: ವೀರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ನಿವಾಸಿ ಎ.ಪಿ. ಗಣಪತಿ ಎಂಬವರು ಎದುರುದಾರ ಸಿ.ಎಂ. ಲೋನಪ್ಪ (ಆಂಡಪ್ಪ) ಎಂಬವರಿಗೆ ಮನೆ ನಿರ್ಮಾಣಕ್ಕಾಗಿ ಗುತ್ತಿಗೆ ನೀಡಿದ್ದರು. ಎದುರುದಾರರು ದಿನಾಂಕ: 15.1.2015 ರಂದು ಮುಗಿಯಬೇಕಾದ ಮನೆ ಕೆಲಸವು ಇದುವರೆಗೂ ಮುಗಿಸದ ಕಾರಣ ಹಾಗೂ ಮನೆ ನಿರ್ಮಾಣಕ್ಕಿಂತ ಹೆಚ್ಚುವರಿಯಾಗಿ ಹಣ ಪಡೆದ ಕಾರಣ ಸೂಕ್ತ ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ವೇದಿಕೆಯಲ್ಲ್ಲಿ ದೂರನ್ನು ಸಲ್ಲಿಸಿದರು. ದೂರಿನ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷ ವಿ.ಎ. ಪಾಟೀಲ ಮತ್ತು ಸದಸ್ಯರಾದ ಕೆ.ಡಿ. ಪಾರ್ವತಿ ಹಾಗೂ ಎಂ.ಎಸ್. ಲತಾ ಅವರನ್ನೊಳಗೊಂಡ ಪೀಠವು ದಾಖಲೆಗಳ ಆಧಾರದ ಮೇಲೆ ಪಿರ್ಯಾದುದಾರರಿಗೆ ರೂ. 2 ಲಕ್ಷ ಮೊತ್ತವನ್ನು, ರೂ. 10 ಸಾವಿರ ಪರಿಹಾರ, ರೂ. 2 ಸಾವಿರಗಳನ್ನು ವ್ಯಾಜ್ಯದ ಖರ್ಚಿನ ಸಹಿತ ಶೇ. 12 ರಂತೆ ಬಡ್ಡಿ ಸೇರಿಸಿ ಪಾವತಿಸುವಂತೆ ಎದುರುದಾರ ಸಿ.ಎಂ. ಲೋನಪ್ಪ (ಆಂಡಪ್ಪ)ರವರಿಗೆ ಆದೇಶಿಸಿದೆ. ಮತ್ತೊಂದು ಪ್ರಕರಣದಲ್ಲಿ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ ನಿವಾಸಿ ರಾಜೀವ್ ಲೋಚನ ಎಂಬವರು ಎದುರುದಾರರಿಂದ ಕೇಬಲ್ ಸಂಪರ್ಕ ಪಡೆದಿದ್ದು, ಎದುರುದಾರರು ನೀಡಿದ ದರದ ಪ್ರಕಾರ ಒಂದು ವರ್ಷದ ಮುಂಗಡ ಹಣ ರೂ. 5,520 ಗಳನ್ನು ಪಡೆದಿದ್ದು, 2-3 ತಿಂಗಳು ಮಾತ್ರ ಕೇಬಲ್ ಸರಿಯಾಗಿ ಬಂದಿದ್ದು, ನಂತರ ಕೇಬಲ್ ಕಡಿತಗೊಳಿಸಿದ ಕಾರಣ ಸೂಕ್ತ ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರನ್ನು ಸಲ್ಲಿಸಿದ್ದರು. ದೂರಿನ ವಿಚಾರಣೆ ನೆಡೆಸಿದ ವೇದಿಕೆಯು ಪಿರ್ಯಾದುದಾರರಿಗೆ ರೂ. 10 ಸಾವಿರ ಹಾಗೂ ರೂ. 2 ಸಾವಿರ ವ್ಯಾಜ್ಯದ ಖರ್ಚಿನ ಸಹಿತ ಶೇ. 10 ರಂತೆ ಬಡ್ಡಿ ಸೇರಿಸಿ ಪಾವತಿಸುವಂತೆ ಎದುರುದಾರರಾದ ಕೊಡಗು ಮೀಡಿಯಾ ಸರ್ವಿಸ್ಸ್‍ರವರಿಗೆ ಆದೇಶಿಸಿತು.