ಮಡಿಕೇರಿ, ಏ.24 : ಹುಚ್ಚ ವೆಂಕಟ್ ನಿರ್ದೇಶನದ ‘ಪೊರ್ಕಿ ಹುಚ್ಚ ವೆಂಕಟ್’ ಚಿತ್ರ ಏ.28 ರಂದು ತೆರೆಗೆ ಬರÀಲಿದೆ. ರಾಜ್ಯದ ಸುಮಾರು 60 ಚಿತ್ರ ಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆಗೊಳಿಸುತ್ತಿರುವದಾಗಿ ಚಿತ್ರದ ನಾಯಕ ನಟ ಹುಚ್ಚ ವೆಂಕಟ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತಮ ಅಭಿನಯ ಮತ್ತು ಕಥಾ ವಸ್ತುವನ್ನು ಹೊಂದಿರುವ ಪೊರ್ಕಿ ಹುಚ್ಚ ವೆಂಕಟ್ ಚಿತ್ರ ಪ್ರತಿಯೊಬ್ಬರು ನೋಡಲು ಯೋಗ್ಯವಾಗಿದೆ ಎಂದು ತಿಳಿಸಿದರು. ತಾಯಿಯ ಮೇಲಿನ ಮಮತೆ, ಕಾವೇರಿ ನದಿಯ ಮೇಲಿನ ಅಭಿಮಾನ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಪ್ರೇಮ ಕಥಾ ಹಂದರವು ಚಿತ್ರದಲ್ಲಿದೆ ಎಂದರು.

ಚಿತ್ರದಿಂದ ಬರುವ ಲಾಭದ ಹಣದಲ್ಲಿ ಶೇ.25 ರಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ಹಾಗೂ ಒಂದು ಭಾಗವನ್ನು ತಂದೆಗೆ ನೀಡುವದಾಗಿ ಹುಚ್ಚ ವೆಂಕಟ್ ತಿಳಿಸಿದರು. ಉತ್ತಮ ಸಂದೇಶವನ್ನು ಹೊಂದಿರುವ ಪೊರ್ಕಿ ಹುಚ್ಚ ವೆಂಕಟ್ ಚಿತ್ರ ಯಶಸ್ವಿ ಯಾಗುತ್ತದೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇಬ್ಬರು ನಾಯಕಿಯರಿರುವ ಈ ಚಿತ್ರದಲ್ಲಿ ಪ್ರೇಮ ಕಥೆಯೊಂದಿಗೆ ಭಾವನಾತ್ಮಕ ದೃಶ್ಯಗಳು ಒಳಗೊಂಡಿದೆ. ಚಿತ್ರದಲ್ಲಿ ‘ಕಾವೇರಿ’ ಮತ್ತು ‘ತಾಯಿ’ಯ ಮಮತೆಯ ಕುರಿತಾದ ಹಾಡನ್ನು ತಾವೇ ಸ್ವತಃ ಹಾಡಿರುವದಾಗಿ ವೆಂಕಟ್ ಮಾಹಿತಿ ನೀಡಿದರು.

ರಾಜಕೀಯ ಪ್ರವೇಶ

ಹುಚ್ಚ ವೆಂಕಟ್ ಸೇನೆಯ ಮೂಲಕ ರಾಜಕೀಯ ಪ್ರವೇಶ ಮಾಡುವದಾಗಿ ತಿಳಿಸಿದ ಹುಚ್ಚ ವೆಂಕಟ್, ರಾಜಕೀಯ ಕ್ಷೇತ್ರದಲ್ಲಿದ್ದು ಕೊಂಡು ಸಮಾಜಸೇವೆ ಮಾಡುವ ದಾಗಿ ತಿಳಿಸಿದರು. ನಗರ ಹಾಗೂ ಪಟ್ಟಣವನ್ನು ಶುಚಿಗೊಳಿಸುವ ಸುಮಾರು 36 ಸಾವಿರ ಕಾರ್ಮಿಕರನ್ನು ಸರ್ಕಾರ ಖಾಯಂಗೊಳಿಸಬೇಕೆಂದು ಅವರು ಇದೇ ಸಂದರ್ಭ ಒತ್ತಾಯಿಸಿದರು.

ನಾಯಕ ನಟಿ ರಚನಾ ಮಾತನಾಡಿ, ಹುಚ್ಚ ವೆಂಕಟ್ ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು, ಪ್ರೇಕ್ಷಕರು ಚಿತ್ರವನ್ನು ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.