ಮೂರ್ನಾಡು, ಏ. 24: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡು ಕಾನ್ಸಿರಾಂ ನಗರದ ನಿವಾಸಿಗಳ ಅಹೋರಾತ್ರಿ ಪ್ರತಿಭಟನೆ ಸೋಮವಾರವೂ ಮುಂದುವರೆದಿದೆ. ಪಾಲೇಮಾಡುವಿನಲ್ಲಿ ಬಹುಜನ ಕಾರ್ಮಿಕ ಸಂಘದ ವತಿಯಿಂದ ಆಚರಿಸಲಾದ ಅಂಬೇಡ್ಕರ್ ಜಯಂತಿಗೆ ಗ್ರಾಮ ಪಂಚಾಯಿತಿ ಯಿಂದ ಅನುಮತಿ ಪಡೆಯದೆ ಅಳವಡಿಸಲಾದ ಬ್ಯಾನರ್ ಹಾಗೂ ರಸ್ತೆಗಳ ನಾಮಫಲಕ ತೆರವುಗೊಳಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ನಿವಾಸಿಗಳ ಮೇಲೆ ಲಾಠಿ ಪ್ರಹಾರ ಮಾಡಿ ದೌರ್ಜನ್ಯ ಎಸಗಿದೆ ಹಾಗೂ ಗ್ರಾಮ ಪಂಚಾಯಿತಿ ಅಂಬೇಡ್ಕರ್ ಭಾವಚಿತ್ರವನ್ನು ಹರಿದು ಹಾಕಿ ಅಪಮಾನ ಮಾಡಲಾಗಿದೆ ಎಂದು ಇಲ್ಲಿನ ನಿವಾಸಿಗಳು ಶನಿವಾರ ಸಂಜೆಯಿಂದ ಅಹೋರಾತ್ರಿಯ ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರದ ಅಂಗನವಾಡಿ ಬಳಿ ಪ್ಲಾಸ್ಟಿಕ್ ಹೊದಿಕೆ ನಿರ್ಮಿಸಿಕೊಂಡು ಮಹಿಳೆಯರು, ಪುರುಷರು ಮಕ್ಕಳು ಕುಳಿತು ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಎರಡು ದಿನ ನಿವಾಸಿಗಳು ಚಾಪೆ ಹಾಕಿ ರಾತ್ರಿ ಸ್ಥಳದಲ್ಲೇ ಮಲಗಿ,
ಬೆಳಗ್ಗಿನ ತಿಂಡಿ, ಮಧ್ಯಾಹ್ನ ಗಂಜಿ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಸ್ಥಳದಲ್ಲೇ ತಯಾರಿಸಿಕೊಂಡು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೆ ಸ್ಥಳ ಬಿಟ್ಟು ಕದಲುವದಿಲ್ಲ ಎಂದು ಪ್ರತಿಭಟನಕಾರರು ಎಚ್ಚರಿಸಿದ್ದಾರೆ.
ಅಮಾಯಕರ ಮೇಲೆ ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ದೌಜನ್ಯವೆಸಗಿದೆ. ಕಳೆದ ಎರಡು ರಾತ್ರಿಗಳು ಇಲ್ಲಿಯೆ ಪ್ರತಿಭಟನೆ ಮಾಡಿಕೊಂಡು ಕುಳಿತ್ತಿದ್ದೇವೆ. ಮುಂದಿನ ಎರಡು ದಿನಗಳಲ್ಲಿ ಪಾಲೇಮಾಡುವಿನಿಂದ ಮಡಿಕೇರಿ ವರೆಗೆ ವಿವಿಧ ಸಮಿತಿ, ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಕಾಲ್ನಡಿಗೆ ಜಾಥ ರೂಪಿಸಿ ಪ್ರತಿಭಟಿಸಲಾಗುತ್ತದೆ ಎಂದು ಕಾನ್ಸಿರಾಂ ನಗರ ಸ್ಥಾಪಕ ಮೊಣ್ಣಪ್ಪ ಎಚ್ಚರಿಸಿದ್ದಾರೆ.