ಮೂರ್ನಾಡು, ಏ. 23 : ಪಾಲೇಮಾಡುವಿನಲ್ಲಿ ಅಂಬೇಡ್ಕರ್ ಜಯಂತಿಗೆ ಅಳವಡಿಸಲಾದ ಬ್ಯಾನರ್ ಹಾಗೂ ರಸ್ತೆಗಳ ನಾಮಫಲಕ ತೆರವುಗೊಳಿಸುವ ಸಂದರ್ಭ ಪೊಲೀಸ್ ಇಲಾಖೆ ನಿವಾಸಿಗಳ ಮೇಲೆ ದೌರ್ಜನ್ಯ ಎಸಗಿದೆ ಹಾಗೂ ಅಂಬೇಡ್ಕರ್ ಭಾವಚಿತ್ರವನ್ನು ಹರಿದು ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭಾನುವಾರ ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ನಿರ್ವಾಣಪ್ಪ ಆಗಮಿಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ಟಿಪ್ಪು ಹೆಸರಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಎಸಗಿದ್ದಾರೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುತ್ತದೆ. ಅಲ್ಲದೆ ಪಾಲೇಮಾಡುವಿನಿಂದ ಮಡಿಕೇರಿವರೆಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡು ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ ಅಮಾಯಕ ಜನರ ಮೇಲೆ ದೌರ್ಜನ್ಯ ಎಸಗಿರುವದು ಖಂಡನೀಯ. ಜಿಲ್ಲೆಯ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಇದರ ವಿರುದ್ಧ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.
ಹೋರಾಟಗಾರ ಮೊಣ್ಣಪ್ಪ ಪ್ರತಿಕ್ರಿಯಿಸಿ ಮಹಿಳೆ ಮಕ್ಕಳು ಎನ್ನದೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಲಾಠಿ ಪ್ರಹಾರದಿಂದ ನಾಲ್ಕು ಮಂದಿ ಆಸ್ಪತ್ರೆ ದಾಖಲು ಗೊಂಡಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಬ್ಯಾನರ್ ಹಾಗೂ ನಾಮಫಲಕ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರೆ, ತೆರವುಗೊಳಿಸುವ ವ್ಯವಸ್ಥೆ ಮಾಡಲಾಗುತ್ತಿತು. ನಮಗೆ ನ್ಯಾಯ ದೊರಕುವವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಸಿದರು. ಹೋರಾಟಗಾರ ಎ.ಕೆ. ಸುಬ್ಬಯ್ಯ, ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ವಸಂತ್, ಮಹಿಳಾ ಮತ್ತು ಮಾನವ ಹಕ್ಕು ಆಯೋಗ ಸಂಯೋಜಕಿ ಶೈಲಾ ವಸಂತ್, ಭೀಮವಾದ ದಲಿತ ಸಂಘದ ರಾಜು, ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಹಾಗೂ ಇತರರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭ ಪ್ರತಿಭಟನಾ ಪ್ರಮುಖರೊಂದಿಗೆ ಮಾತುಕತೆ ನಡೆಸಿದ ಸುಬ್ಬಯ್ಯ ಅವರು ನಿನ್ನೆಯ ಘಟನೆಗೆ ಬಿಜೆಪಿ, ಸಂಘಪರಿವಾರ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿ ದರು. ಬ್ಯಾನರ್ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅವರು ಆಗ್ರಹಿಸಿದರು.