ಸೋಮವಾರಪೇಟೆ, ಏ. 24: ಪ್ರವಾಸೋದ್ಯಮದ ಹೆಸರಲ್ಲಿ ಕೊಡಗು ಜಿಲ್ಲೆಯ ಮೂಲ ಸ್ವರೂಪಕ್ಕೆ ಯಾವದೇ ಧಕ್ಕೆ ತರಬಾರದು. ಸ್ಥಳೀಯ ಸಂಸ್ಥೆಗಳು ಪರಿಸರ ನಾಶದಂತಹ ಕಾಮಗಾರಿಗಳಿಗೆ ಅನುಮತಿ ನೀಡುವ ಸಂದರ್ಭ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಕಿವಿಮಾತು ಹೇಳಿದರು.

ಬೇಳೂರು ಬೃಹ್ಮಮಠದಲ್ಲಿ ನಿರ್ಮಿಸಲಾಗಿರುವ ಶ್ರೀ ಜಗಜ್ಯೋತಿ ಬಸವೇಶ್ವರ ನೀರುಶುದ್ಧೀಕರಣ ಘಟಕ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

ಹಾರಂಗಿಯಿಂದ ಸೋಮವಾರ ಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯಲ್ಲಿ ಶುದ್ಧೀಕರಣ ಘಟಕಕ್ಕೆ 10 ವರ್ಷಗಳ ಹಿಂದೆ ಮಠದ ಜಾಗವನ್ನು ದಾನವನ್ನಾಗಿ ನೀಡಲಾಗಿತ್ತು. ಹಲವು ವರ್ಷಗಳ ನಂತರ ಘಟಕಕ್ಕೆ ಬಸವೇಶ್ವರರ ಹೆಸರು ನಾಮಕರಣ ಮಾಡಿರುವದು ಸಂತಸ ತಂದಿದೆ ಎಂದು ಹೇಳಿದರು.

ಸಾರ್ವಜನಿಕರ ಉಪಯೋಗಕ್ಕೆ ಯಾವದೇ ಪ್ರತಿಫಲಾಪೇಕ್ಷೆಯಿಲ್ಲದೆ ದಾನ ನೀಡುವ ದಾನಿಗಳನ್ನು ಎಂದಿಗೂ ಮರೆಯಬಾರದು. ಅವರನ್ನು ಸ್ಮರಿಸುವ ಕಾರ್ಯ ಆಗಬೇಕು ಎಂದ ಶರಣರು, ಇಂದು ಸ್ಥಳೀಯ ಸಂಸ್ಥೆಗಳು ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಕುಡಿಯುವ ನೀರು, ರಸ್ತೆ, ದಾರಿದೀಪ, ನೈರ್ಮಲೀಕರಣ ಸವಾಲಾಗಿ ಪರಿಣಮಿಸಿದೆ. ಎಲ್ಲೆಲ್ಲೂ ಕಸ ವಿಲೇವಾರಿ ಕಗ್ಗಂಟಾಗಿ ಉಳಿದಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಮಾತನಾಡಿ, ಪಟ್ಟಣದ ಜನತೆಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಗೆ ಬೇಳೂರು ಬಾಣೆ ಸಮೀಪ ನಿವೇಶದ ಅಗತ್ಯವಿದ್ದ ಹಿನ್ನೆಲೆ ಅಂದಿನ ಪಪಂ ಆಡಳಿತ ಮಂಡಳಿಯ ಮನವಿಗೆ ಸ್ಪಂದಿಸಿದ ಸ್ವಾಮೀಜಿಗಳು ಅಗತ್ಯವಿದ್ದ ನಿವೇಶನವನ್ನು ದಾನದ ರೂಪದಲ್ಲಿ ನೀಡುವ ಮೂಲಕ ತಮ್ಮ ಉದಾರತೆ ತೋರಿದ್ದಾರೆ ಎಂದರು.

ಈ ಸಂದರ್ಭ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ, ಸದಸ್ಯರುಗಳಾದ ಬಿ.ಎಂ.ಸುರೇಶ್, ಬಿ.ಸಿ. ವೆಂಕಟೇಶ್, ಸುಷ್ಮಾ, ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಉದಯ ಕುಮಾರ್, ಸಿಬ್ಬಂದಿಗಳು, ಎಸ್‍ಜೆಎಂ ತೋಟದ ವ್ಯವಸ್ಥಾಪಕ ಶಶಿಧರ್ ಮತ್ತಿತರರು ಇದ್ದರು.