ಮಡಿಕೇರಿ, ಏ. 24: ದೇಶಾದ್ಯಂತ ಅದ್ಧೂರಿಯ ಯಶಸ್ಸು ಕಂಡಿದ್ದ ಚಿತ್ರ ಬಾಹುಬಲಿ... ಇದೀಗ ಬಾಹುಬಲಿ ಚಿತ್ರದ ಮುಂದುವರಿದ ಭಾಗ ಬಾಹುಬಲಿ-2 ಬಿಡುಗಡೆಗೆ ಸಿದ್ದಗೊಂಡಿದ್ದು, ತಾ. 28ಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಈ ಚಿತ್ರದ ಬಿಡುಗಡೆಗೆ ಮುನ್ನ ಚಿತ್ರದ ಕಟ್ಟಪ್ಪ ಪಾತ್ರಧಾರಿಯ ವಿಚಾರ ಕರ್ನಾಟಕ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಹಲವು ವರ್ಷಗಳ ಹಿಂದೆ ಕನ್ನಡಿಗರ ವಿರುದ್ಧ ಅವಹೇಳನಕರವಾಗಿ ಪ್ರಚೋದಿಸುವ ಹೇಳಿಕೆ ನೀಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಭಾರೀ ವಿರೋಧ ವ್ಯಕ್ತಗೊಂಡಿತ್ತು. ರಾಜ್ಯದಲ್ಲಿ ಇದು ಭಾರೀ ಸುದ್ದಿಯಾಗಿರುವಂತೆ ಚಿತ್ರದ ನಿರ್ದೇಶಕ ರಾಜ್‍ಮೌಳಿ ಕ್ಷಮೆಯಾಚಿಸಿದ್ದು, ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವಂತೆ ವಿನಂತಿಸಿದ್ದರು. ಆದರೂ ವಿರೋಧ ಮುಂದುವರಿದು, ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಸ್ವತಃ ಕ್ಷಮೆಯಾಚಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಈ ನಡುವೆ ನಟ ಸತ್ಯರಾಜ್ ಕ್ಷಮೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯ ಗೊಂದಲ ಬಹುತೇಕ ನಿವಾರಣೆಯಾದಂತಾಗಿದೆ.
ಕೊಡಗಿನ ಡ್ಯಾನಿ ಕುಟ್ಟಪ್ಪ : ಇದು ಒಂದೆಡೆಯಿರಲಿ ಈ ಚಿತ್ರದಲ್ಲಿ ಕನ್ನಡಿಗರೂ ನಟಿಸಿದ್ದಾರೆ. ಬಾಹುಬಲಿ-1ರಲ್ಲಿ ನಟಿಸಿದ್ದ ಸುದೀಪ್ ಅವರೊಂದಿಗೆ ಈ ಬಾರಿ ಬಾಹುಬಲಿ-2ರಲ್ಲಿ ಕೊಡಗಿನ ಯುವಕರೊಬ್ಬರು ಖಳನಾಯಕ ಪಾತ್ರಧಾರಿಯಾಗಿ ನಟಿಸಿರುವದು ವಿಶೇಷ.
ಕರಡ ಗ್ರಾಮದವರಾದ ಕನ್ನಡ ಚಿತ್ರರಂಗದಲ್ಲಿ ಖಳನಾಯಕ ಪಾತ್ರಧಾರಿಯಾಗಿ ಗಮನ ಸೆಳೆಯುತ್ತಿರುವ ಬೇಪಡಿಯಂಡ ಡ್ಯಾನಿ ಕುಟ್ಟಪ್ಪ ಬಾಹುಬಲಿ-2ರಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ರೂ. 250 ಕೋಟಿ ಬಜೆಟ್‍ನ ಬಾಹುಬಲಿ-2 ಚಿತ್ರದಲ್ಲಿ ಸಾಕಷ್ಟು ಪ್ರಮುಖ ನಟನಟಿಯರಿದ್ದು, ಇದು ಅದ್ದೂರಿ ವೆಚ್ಚದ ಚಿತ್ರ. ಈ ಚಿತ್ರದಲ್ಲಿ ಡ್ಯಾನಿ ಕುಟ್ಟಪ್ಪ ಅವರದ್ದು, ಓರ್ವ ಖಳನಾಯಕನ ಪಾತ್ರವಾಗಿದೆ. ‘ಶಕ್ತಿ’ಯೊಂದಿಗೆ ಈ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಅವರು ತನ್ನದು ಈ ಸಿನಿಮಾಕ್ಕೆ ಹೊಂದಾಣಿಕೆಯಾಗುವ ಒಂದು ಪಾತ್ರವಾಗಿದ್ದು, 14 ದಿನ ಹೈದರಾಬಾದ್‍ನಲ್ಲಿ ಚಿತ್ರೀಕರಿಸಲಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ವಿವಾದದ ಬಗ್ಗೆ ತಾವೇನೂ ಪ್ರತಿಕ್ರಿಯಿಸುವದಿಲ್ಲ ಎಂದರು. ಹಲವು ವರ್ಷಗಳಿಂದ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವ ಡ್ಯಾನಿ ಸುದೀಪ್ ನಾಯಕ ನಟನಾಗಿರುವ ಮಾಣಿಕ್ಯ, ಹೆಬ್ಬುಲಿ, ಪುನೀತ್ ರಾಜ್‍ಕುಮಾರ್ ಒಟ್ಟಿಗೆ ಪವರ್ ಹಾಗೂ ರಾಜ್‍ಕುಮಾರ್, ದರ್ಶನ್‍ರ ಐರಾವತ, ಶಿವರಾಜ್‍ಕುಮಾರ್ ನಟನೆಯ ಶಿವಲಿಂಗ, ವಿಜಯ್ ಅಭಿನಯದ ಮಾಸ್ತಿಗುಡಿ ಸೇರಿದಂತೆ 60 ಚಿತ್ರದಲ್ಲಿ ನಟಿಸಿದ್ದಾರೆ.
ತಮಿಳಿನಲ್ಲಿ ಲಾರೆನ್ಸ್ ಅಭಿನಯದ ಶಿವಲಿಂಗ ಚಿತ್ರದಲ್ಲೂ ಇವರು ನಟಿಸಿದ್ದು, ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಕರಡ ಗ್ರಾಮದ ಬೇಪಡಿಯಂಡ ದಿ|| ಕುಟ್ಟಪ್ಪ ಹಾಗೂ ಚೆಂಬವ್ವ ದಂಪತಿಯ ಪುತ್ರರಾಗಿರುವ ಡ್ಯಾನಿ ಪ್ರಸ್ತುತ ಬೆಂಗಳೂರಿನಲ್ಲಿದ್ದಾರೆ. ಇವರ ಸಹೋದರ ಅಜಿತ್ ಕುಟ್ಟಪ್ಪ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
-ಶಶಿ ಸೋಮಯ್ಯ