ಸುಂಟಿಕೊಪ್ಪ, ಏ.24: ಕಾರು ಮೋಟಾರ್‍ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಕಾರು ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ.
ಇಲ್ಲಿಗೆ ಸಮೀಪದ ಚೆಟ್ಟಳ್ಳಿ ರಸ್ತೆಯ ಮತ್ತಿಕಾಡು ಬಳಿ ಸ್ಯಾಂಟ್ರೊ ಕಾರು ಹಾಗೂ ಮೋಟಾರ್ ಬೈಕ್ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ ಮೋಟಾರ್ ಬೈಕ್ ಚಾಲಿಸುತ್ತಿದ್ದ ಪನ್ಯ ಬೆಟ್ಟೆಗೇರಿ ನಿವಾಸಿ ಎಲೆಕ್ಟ್ರಿಷಿಯನ್ ಮಂಜುನಾಥ್ (32) ಎಂಬಾತನ ತಲೆಗೆ ಗಂಭೀರ ಪೆಟ್ಟಾಗಿದೆ. ಕಾರಿನಲ್ಲಿದ್ದವರು ಪರಾರಿಯಾಗಿದ್ದು, ಇದೇ ಸಂದರ್ಭ ಈ ರಸ್ತೆಗಾಗಿ ತನ್ನ ವಾಹನದಲ್ಲಿ ಬರುತ್ತಿದ್ದ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಅವರ ಮಿತ್ರ ಮುರುಳಿಯವರು ಗಂಭೀರ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಮಂಜುನಾಥ ಅವರನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು.
ಪ್ರಥಮ ಚಿಕಿತ್ಸೆ ಬಳಿಕ 108 ಆರೋಗ್ಯ ಕವಚ ವಾಹನದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣದ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡು ಕಾರು ಮಾಲೀಕನ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.