ಕೂಡಿಗೆ, ಏ. 23: ಕೊಡಗಿನ ಗಡಿಭಾಗ ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮದಲ್ಲಿ 1981ರಲ್ಲಿ ಪ್ರಾರಂಭಗೊಂಡ ಜಿಲ್ಲೆಯ ಏಕೈಕ ಕಾವೇರಿ ಹ್ಯಾಂಡ್‍ಲೂಂ ಶಾಖೆಯಾದ ಕಾವೇರಿ ಸಮೂಹ ನೇಯ್ಗೆ ಕೇಂದ್ರ ಅಭಿವೃದ್ಧಿ ಕಾಣದೆ ಮೂಲೆ ಗುಂಪಾಗಿದೆ.

ಈ ನೇಯ್ಗೆ ಕೇಂದ್ರದಲ್ಲಿ ಆರಂಭದಲ್ಲಿ ನೂರಾರು ಮಂದಿ ನೇಯ್ಗೆಯಲ್ಲಿ ತೊಡಗಿದ್ದು, ಇದೀಗ 15 ಜನ ಮಾತ್ರ ಕೆಲಸ ಮಾಡುವಂತಹ ಪ್ರಸಂಗ ಎದುರಾಗಿದೆ. ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿಗಮದ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಅಧಿಕಾರಿಗಳು ಸಮಗ್ರವಾಗಿ ಈ ಕೇಂದ್ರದಲ್ಲಿ ನೇಯ್ಗೆ ಮಾಡಲು ಕಚ್ಚಾ ವಸ್ತುಗಳನ್ನು ನೀಡುತ್ತಿದ್ದಾರೆ. ಸಿದ್ಧವಾದ ಬೆಡ್‍ಶೀಟ್ ಮತ್ತು ಟವಲ್‍ಗಳನ್ನು ಸಮಯಕ್ಕೆ ಸರಿಯಾಗಿ ಮಾರುಕಟ್ಟೆಯ ಮೂಲಕ ಇಲಾಖೆ ಸಾಗಾಟ ಮಾಡಿದರೂ ಸರಿಯಾದ ಬೆಲೆಯಿಲ್ಲದೆ, ಕೈಮಗ್ಗದಲ್ಲಿ ನೇಯ್ಗೆ ಮಾಡುವ ನೇಕಾರರಿಗೆ ಅವರ ಕೆಲಸಕ್ಕೆ ತಕ್ಕಂತೆ ಹಣ ದೊರಕುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಯುವಕರು ಸ್ವಉದ್ಯೋಗ ಅವಲಂಭಿಸಲು ಹಾಗೂ ಕಾರ್ಯೋನ್ಮುಖರಾಗಲು ಸರಕಾರ ಅನೇಕ ಯೋಜನೆಗಳನ್ನು ಮಾಡಿದರೂ ಶಿರಂಗಾಲ ಗ್ರಾಮದಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರು ಬಹುಜನರಿದ್ದು, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ನೇಯ್ಗೆ ಕೇಂದ್ರ ಅನುಕೂಲವಾಗಿತ್ತು. ಆದರೆ ಇದೀಗ ಈ ಬಟ್ಟೆ ಉತ್ಪಾದನಾ ಕೇಂದ್ರ ದಿನಕಳೆದಂತೆ ಶಿಥಿಲಾವಸ್ಥೆ ತಲಪುತ್ತಿದೆ.

ಜಿಲ್ಲೆಯ ಇಲಾಖಾಧಿಕಾರಿಗಳಾಗಲೀ ಅಥವಾ ಕೈಮಗ್ಗ ನಿಗಮದ ರಾಜ್ಯದ ಪದಾಧಿಕಾರಿಗಳಾಗಲೀ ಇತ್ತ ಗಮನಹರಿಸದೇ ಇರುವದರಿಂದ ಸ್ಥಳೀಯ ಯುವಕರು ಕೆಲಸ ನಿಮಿತ್ತ ಬೇರೆ ಜಿಲ್ಲೆಗಳಿಗೆ ತೆರಳುವಂತಹ ಪ್ರಸಂಗ ಎದುರಾಗಿದೆ.

ಜಿಲ್ಲೆಯಲ್ಲೇ ಏಕೈಕ ಕೇಂದ್ರವಾಗಿರುವ ಈ ಬಟ್ಟೆ ಉತ್ಪಾದನಾ ಕೇಂದ್ರವು ಉಪ ಶಾಖೆಗಳನ್ನು ಹೊಂದಿದ್ದು, ಮಡಿಕೇರಿ ಮತ್ತು ಕುಶಾಲನಗರದಲ್ಲಿ ಖಾದಿ ವಸ್ತು ಮಾರಾಟದ ಕೇಂದ್ರಗಳನ್ನು ಹೊಂದಿದ್ದು, ಇದೀಗ ಕುಶಾಲನಗರದ ಘಟಕ ಮುಚ್ಚಲ್ಪಟ್ಟಿದೆ.

ಗ್ರಾಮಾಂತರ ಪ್ರದೇಶದ ಕಾರ್ಮಿಕರಿಗೆ ಅನುಕೂಲವಾಗಿದ್ದ ಈ ನೇಯ್ಗೆ ಕೇಂದ್ರವನ್ನು ಪುನಶ್ಚೇತನಗೊಳಿಸಲು ಪ್ರಮುಖವಾಗಿ ಇಲಾಖೆಯ ಅಧಿಕಾರಿಗಳು ನೇಕಾರರಿಗೆ ಹೆಚ್ಚು ಸಂಬಳವನ್ನು ಸಮರ್ಪಕವಾಗಿ ನೀಡಿದಲ್ಲಿ ಈ ವಿಭಾಗದಲ್ಲಿ ಹೆಚ್ಚು ಖಾದಿ ವಸ್ತುಗಳಾದ ಬೆಡ್‍ಶೀಟ್, ಟವಲ್ ಹಾಗೂ ಖಾದಿಗೆ ಸಂಬಂಧಿಸಿದ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ರಾಜ್ಯದ ಮೂಲೆಮೂಲೆಗೆ ಸಾಗಿಸಲು ಅನುಕೂಲವಾಗುವದು ಎಂದು ಇಲ್ಲಿನ ನೇಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ 20 ವರ್ಷಗಳಿಂದ ನೇಕಾರರಾಗಿ ದುಡಿದ ಚಂದ್ರಪ್ಪ, ಅಪ್ಪಾಜಿ, ಕೃಷ್ಣಪ್ಪ, ಶಿವಪ್ಪ, ಪ್ರಕಾಶ್ ಪತ್ರಿಕೆಯೊಂದಿಗೆ ಮಾತನಾಡಿ, ಈ ನೇಯ್ಗೆ ಘಟಕ ಸದೃಢವಾದ ಕಟ್ಟಡವನ್ನು ಹೊಂದಿಲ್ಲ. ಕಟ್ಟಡವನ್ನು ಆಧುನೀಕರಣಗೊಳಿಸಿ, ಹೊಸ ಉಪಕರಣಗಳನ್ನು ಅಳವಡಿಸಬೇಕಾಗುತ್ತದೆ. ಸಮರ್ಪಕವಾದ ಅಧಿಕಾರಿ ನೇಮಕಗೊಂಡು ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಹೋದಲ್ಲಿ ಈ ಘಟಕ ಅಭಿವೃದ್ಧಿಯತ್ತ ಸಾಗಲು ಯಾವದೇ ಅಡ್ಡಿ ಇರುವದಿಲ್ಲ ಎಂದು ಹೇಳಿದರು.

ಕಳೆದ ಐದು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ ಸಂದರ್ಶಕರ ಪುಸ್ತಕದಲ್ಲಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವದಾಗಿ ಭರವಸೆ ನೀಡಿದ ಜನಪ್ರತಿನಿಧಿಗಳು ಇದುವರೆಗೂ ಇದರತ್ತ ಗಮನಹರಿಸಿಲ್ಲ.

ನೇಯ್ಗೆಕಾರರ ಕೈಗಳು ಈ ಕೇಂದ್ರದ ಸಮಸ್ಯೆಗಳಿಂದ ಬಲ ಕಳೆದುಕೊಳ್ಳುತ್ತಿವೆ. ಕಾವೇರಿ ಕೈಮಗ್ಗ ಕೇಂದ್ರದಲ್ಲಿ ಮಗ್ಗಗಳ ಸದ್ದಡಗುವ ಮುನ್ನವೇ ನೇಯ್ಗೆಕಾರರ ಸಮಸ್ಯೆ ಪರಿಹರಿಸಿ, ಕೈಮಗ್ಗ ಕೇಂದ್ರಕ್ಕೆ ಕಾಯಕಲ್ಪ ನೀಡಲು ಜಿಲ್ಲಾಡಳಿತ, ಜಿ.ಪಂ., ಸ್ಥಳೀಯ ಶಾಸಕರು ಹಾಗೂ ಸ್ಥಳೀಯ ಗ್ರಾ.ಪಂ. ಹೆಚ್ಚು ಉತ್ತೇಜನ ನೀಡಿದಲ್ಲಿ ನೇಕಾರರ ಬದುಕು ಸಾರ್ಥಕವಾಗಲಿದೆ.