ಮಡಿಕೇರಿ, ಏ. 24: ಯವಕಪಾಡಿ ಗ್ರಾಮದಲ್ಲಿರುವ ರೆಸಾರ್ಟ್ವೊಂದು ಈ ಭಾಗದಲ್ಲಿ ವಾಸಿಸುತ್ತಿರುವ ಅಡಿಯ ಜನಾಂಗ ಸಂಚರಿಸುತ್ತಿದ್ದ ರಸ್ತೆಗೆ ತಡೆಯೊಡ್ಡಿದೆ ಎಂದು ಆರೋಪಿಸಿರುವ ಕಾವೇರಿ ಸೇನೆ ಒಂದು ತಿಂಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿಸೇನೆ ಸಂಚಾಲಕ ಕೆ.ಎ. ರವಿಚಂಗಪ್ಪ, ಕಳೆದ ಐವತ್ತು, ಅರವತ್ತು ವರ್ಷಗಳಿಂದ ಯವಕಪಾಡಿ ವ್ಯಾಪ್ತಿಯಲ್ಲಿ ನೆಲೆ ನಿಂತಿರುವ ಅಡಿಯ ಕುಟುಂಬಗಳಿಗೆ ಸಂಚಾರಕ್ಕಿದ್ದ ರಸ್ತೆಗೆ ಅಡ್ಡಿಪಡಿಸಲಾಗಿದ್ದು, ಈ ಪ್ರಕರಣದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಮುಂದಿನ ಮೂವತ್ತು ದಿನಗಳ ಒಳಗೆ ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಡಿಯರು ಈಗಾಗಲೇ ಮನವಿಯನ್ನು ಸಲ್ಲಿಸಿದ್ದರೂ ಯಾವದೇ ಸ್ಪಂದನ ದೊರಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸತ್ಯಾನ್ವೇಷಣಾ ಸಮಿತಿಯ ಪ್ರಮುಖ ಕೇಟೋಳಿರ ಸನ್ನಿ ಸೋಮಣ್ಣ ಮಾತನಾಡಿ, ರೆಸಾರ್ಟ್ ಬಗ್ಗೆ 2007ರಿಂದಲೇ ಗ್ರಾಮ ಪಂಚಾಯಿತಿ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯುತ್ತಾ ಬಂದಿದ್ದರೂ ಇಲ್ಲಿಯವರೆಗೆ ವಿರುದ್ಧ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಸ್ಥಳೀಯ ನಿವಾಸಿಗಳಾದ ಅಡಿಯರ ಅಮ್ಮುಣಿ, ಸುಂದರಿ ಹಾಗೂ ಚಾತಮಣಿ ಮಾತನಾಡಿ, ರೆಸಾರ್ಟ್ನಿಂದ ತಮ್ಮ ನಿತ್ಯ ಬದುಕಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.